ಮೂರು ತಿಂಗಳ ಬಳಿಕ ಫ್ರೀ ಬಸ್ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಕಡ್ಡಾಯ.. ಅಪ್ಲೈ ಮಾಡೋದು ಹೇಗೆ..?

ಬೆಂಗಳೂರು: ಉಚಿತ ಪ್ರಯಾಣ ಶುರುವಾಯ್ತು.. ಆರಾಮಾಗಿ ಇನ್ಮೇಲೆ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಫ್ರೀಯಾಗಿ ಓಡಾಡ್ಬಹುದು.. ಸದ್ಯಕ್ಕೆ ಸರ್ಕಾರ ಹೇಳಿರೋದ್ರಲ್ಲಿ ಯಾವುದಾದ್ರೂ ಒಂದು ಐಡಿ ಕಾರ್ಡ್‌ ತೋರಿಸಿದ್ರೆ ಸಾಕು.. ಆದ್ರೆ ಇದು 3 ತಿಂಗಳ ತನಕ ಮಾತ್ರ.. ಆ ಕಡ್ಡಾಯವಾಗಿ ನೀವೊಂದು ಕಾರ್ಡ್‌ನ ಪಡೀಲೇಬೇಕು.

ಉಚಿತ ಪ್ರಯಾಣ ಅಂತ ಖುಷಿ ಖುಷಿ ಬಸ್‌ ಹತ್ತುತ್ತಿರೋ ಮಹಿಳೆಯರೇ ನಾವ್‌ ಹೇಳ್ತಿರೋದನ್ನ ಗಮನ ಇಟ್ಟು ಕೇಳಿ.. ಯಾವುದಾದ್ರೂ ದಾಖಲೆ ತೋರಿಸಿ ಕೇವಲ 3 ತಿಂಗಳಷ್ಟೇ ನೀವು ಸಾರಿಗೆ ಬಸ್‌ನಲ್ಲಿ ಓಡಾಡಬಹುದು. ನಂತ್ರ ಶಕ್ತಿ ಸ್ಮಾರ್ಟ್‌ ಕಾರ್ಡ್‌ ಪಡೆಯೋದು ಕಂಪಲ್ಸರಿ.

‘ಶಕ್ತಿ ಸ್ಮಾರ್ಟ್‌ ಕಾರ್ಡ್‌’ ಹೀಗೆ ಪಡೀರಿ

ನಿಮ್ಮ ಹತ್ತಿರದ ಗ್ರಾಮ ಒನ್ ಕಚೇರಿಗೆ ಭೇಟಿ ಕೊಡಿ, ಇಲ್ಲಾ ಅಂದ್ರೆ ಸೈಬರ್ ಸೆಂಟರ್‌ಗಳಲ್ಲೋ ಅಥವಾ ನಿಮ್ಮ ಮೊಬೈಲ್‌, ಸಿಸ್ಟಮ್‌ಗಳಲ್ಲಿ ಆದ್ರೂ ಆಗಬಹುದು. ಸೇವಾ ಸಿಂಧು ಪೋರ್ಟಲ್‌ಗೆ ಲಾಗಿನ್‌ ಆಗಿ. ಅಲ್ಲಿ ಶಕ್ತಿ ಸ್ಮಾರ್ಟ್‌ ಕಾರ್ಡ್‌ಗೆ ಅರ್ಜಿ ಪಡೆಯೋ ಲಿಂಕ್‌ ಇರುತ್ತೆ. ಅದನ್ನ ಕ್ಲಿಕ್‌ ಮಾಡಿ ಸ್ಮಾರ್ಟ್‌ ಕಾರ್ಡ್‌ಗೆ ನೋಂದಣಿ ಮಾಡಿಸಿಕೊಳ್ಳಿ. ಈ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅಥವಾ ಬೇರ್ಯಾವುದೇ ಅಡ್ರೆಸ್ ಪ್ರೂಫ್ ನೀಡಿದ್ರೆ ಅಥವಾ ಅಪ್ಲೋಡ್‌ ಮಾಡಿದ್ರೆ ನಿಮಗೆ ಶಕ್ತಿ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಇನ್ನು ಸ್ಮಾರ್ಟ್ ಕಾರ್ಡಿಗೆ ಆಗುವ ಖರ್ಚನ್ನ ರಾಜ್ಯ ಸರ್ಕಾರವೇ ಭರಿಸಲಿದೆ.

ಈ ನಿಯಮಗಳೂ ಗೊತ್ತಿರಲಿ

ಮಹಿಳೆಯರು ಉಚಿತ ಲಗೇಜ್ ಮಿತಿಯನ್ನಷ್ಟೇ ಕೊಂಡೊಯ್ಯಬೇಕು. ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋದಲ್ಲಿ ಆ ಲಗೇಜ್‌ ದರ ನೀಡಲೇಬೇಕಾಗುತ್ತೆ. ಶಕ್ತಿ ಯೋಜನೆಯಡಿ ನಾರ್ಮಲ್ ಬಸ್ಸುಗಳಲ್ಲೂ ಸೀಟ್ ಬುಕ್ಕಿಂಗ್ ಮಾಡಿಕೊಂಡು ಮಹಿಳೆಯರು ಪ್ರಯಾಣ ಮಾಡಬಹುದು. ಬಿಎಂಟಿಸಿ ಹೊರತು ಪಡಿಸಿ ಬೇರೆಲ್ಲಾ ಬಸ್ಗಳಲ್ಲೂ ಬುಕ್ಕಿಂಗ್ ಲಭ್ಯವಿರಲಿದೆ.

ಇನ್ನು ಸಾಮಾನ್ಯ ಬಸ್‌ಗಳಲ್ಲಿ ಪುರುಷರಿಗೆ 50% ಮೀಸಲಾತಿ ಕಡ್ಡಾಯವಾಗಿರಲಿದೆ. ಪುರುಷರು ಮಹಿಳೆಯರ ಸೀಟ್‌ನಲ್ಲಿ ಕೂತ್ರೆ 200 ರೂಪಾಯಿ ದಂಡ ವಿಧಿಸಲಾಗುತ್ತೆ. ಹಾಗಂತ ಪುರುಷರ ಸೀಟ್‌ನಲ್ಲಿ ಮಹಿಳೆಯರು ಕೂತ್ರೆ ಯಾವುದೇ ದಂಡ ಇರೋದಿಲ್ಲ. ಪುರುಷರ ಸೀಟು ಭರ್ತಿಯಾಗದೇ ಇದ್ದಾಗ ಸೀಟ್ನಲ್ಲಿ ಕೂರಬಹುದು ಅನ್ನೋ ನಿಯಮ ಮಾಡಲಾಗಿದೆ.

ಮಹಿಳಾ ಪ್ರಯಾಣಿಕರ ಜೊತೆ ಕಿರಿಕಿರಿ ಮಾಡದಂತೆ ಡ್ರೈವರ್ ಮತ್ತು ಕಂಡಕ್ಟರ್ಗಳಿಗೆ ಸೂಚನೆ ನೀಡಲಾಗಿದೆ. ನಿಲುಗಡೆಯ ಜಾಗದಲ್ಲಿ ನಿಲ್ಲಿಸದೇ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡುವುದು ಮತ್ತು ಮನಸಿಗೆ ಬಂದ ಹಾಗೆ ವರ್ತಿಸುವುದು ಕಂಡುಬಂದ್ರೆ ಅಂಥವರ ವಿರುದ್ಧ ಕ್ರಮ ಕಟ್ಟಿಟ್ಟ ಬುತ್ತಿ ಅಂತ ಸರ್ಕಾರ ಹೇಳಿದೆ. ಕಂಡಕ್ಟರ್ಗಳು ಪ್ರತಿ ಮಹಿಳೆಗೂ ‘ಶೂನ್ಯ’ ದರದ ಟಿಕೆಟ್ ನೀಡಲೇಬೇಕು. ಮಹಿಳೆಯರಿಗೆ ಉಚಿತ ಟಿಕೆಟ್ ನೀಡಿಲ್ಲ ಎಂದರೆ ಕಂಡಕ್ಟರ್ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ ಜರುಗೋ ಎಚ್ಚರಿಕೆ ಕೂಡ ನೀಡಲಾಗಿದೆ.

Scroll to Top