ಬೆಂಗಳೂರು: ಸೋಮವಾರ ಮತ್ತು ಮಂಗಳವಾರದ ನಡುವೆ ಕರ್ನಾಟಕದಾದ್ಯಂತ 29 ರಸ್ತೆ ಅಪಘಾತತ ಸಂಭವಿಸಿದ್ದು, ದುರ್ಘಟನೆಯಲ್ಲಿ 33 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ನಿಯಂತ್ರಣ ಕೊಠಡಿಯ ಅಂಕಿಅಂಶಗಳು ತೋರಿಸಿವೆ. ಈ ಬಗ್ಗೆ ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಮಂಗಳವಾರ ಡೇಟಾವನ್ನು ಹಂಚಿಕೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ 6 ರಿಂದ ಮಂಗಳವಾರ ಬೆಳಿಗ್ಗೆ 6 ರ ನಡುವೆ ಸಂಭವಿಸಿದ 29 ಅಪಘಾತಗಳ ಪೈಕಿ 21 ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳೇ ಅಪಘಾತಕ್ಕೀಡಾಗಿವೆ. ಈ ಅವಧಿಯಲ್ಲಿ ರಾಜ್ಯದಾದ್ಯಂತ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ 28 ಜನರು ಗಾಯಗೊಂಡಿದ್ದಾರೆ.
ಸಾರ್ವಜನಿಕರು ಪ್ರಯಾಣಿಸುವಾಗ ನಿಯಮಗಳನ್ನು ಪಾಲಿಸುವಂತೆ ಎಡಿಜಿಪಿ ಕುಮಾರ್ ಮನವಿ ಮಾಡಿದ್ದಾರೆ. ಪ್ರತಿನಿತ್ಯ ರಸ್ತೆ ಅಪಘಾತಗಳಲ್ಲಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ದಯವಿಟ್ಟು ಟ್ರಾಫಿಕ್ ಮತ್ತು ಸುರಕ್ಷತಾ ನಿಯಮಗಳನ್ನು ಅನುಸರಿಸಿ. ಕೇವಲ ಟ್ರಾಫಿಕ್ ದಂಡವನ್ನು ತಪ್ಪಿಸಲು ಅಲ್ಲ, ನಿಮ್ಮ ಮತ್ತು ಇತರರ ಜೀವಗಳನ್ನು ಉಳಿಸಲು ನಿಯಮ ಪಾಲಿಸುವಂತೆ ಟ್ವೀಟ್ ಮಾಡಿದ್ದಾರೆ.