ಮಲ್ಪೆ : ಒಂದೂವರೆ ವರ್ಷದಿಂದ ಜೆಟ್ಟಿಯಡಿ ಬಂದಿಯಾಗಿದ್ದ ಶ್ವಾನಗಳಿಗೆ ಬಿಡುಗಡೆ ಭಾಗ್ಯ

ಮಲ್ಪೆ: ಒಂದೂವರೆ ವರ್ಷದಿಂದ ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯಡಿ ಬಂದಿಯಾಗಿದ್ದ ಎರಡು ನಾಯಿಗಳಿಗೆ ಈಶ್ವರ ಮಲ್ಪೆ ಅವರು ಕೊನೆಗೂ ಮುಕ್ತಿ ದೊರಕಿಸಿದ್ದಾರೆ.

ಒಂದೂವರೆ ವರ್ಷದ ಹಿಂದೆ ಈ ಎರಡು ನಾಯಿಗಳು ಯಾವುದೋ ಕಾರಣಕ್ಕೆ ಜೆಟ್ಟಿಗೆ ಬಿದ್ದಿದ್ದವು. ಸುತ್ತಲೂ ನೀರು ತುಂಬಿರುವುದರಿಂದ ಅವುಗಳಿಗೆ ಮೇಲೆ ಬರಲು ಸಾಧ್ಯವಾಗದೆ ಬಂದಿಯಾಗಿದ್ದವು.

ಜೆಟ್ಟಿಯಡಿ ಬಾಗಿಕೊಂಡೆ ಇದ್ದು ದಿನ ದೂಡುತ್ತಿದ್ದವು. ಮೀನುಗಾರರು ಎಸೆದ ಆಹಾರವನ್ನು ತಿಂದು ಜೀವ ಉಳಿಸಿಕೊಂಡಿದ್ದವು. ಆಪದ್ಬಾಂಧವ ಈಶ್ವರ ಮಲ್ಪೆ ಅವರು ಈ ಮೊದಲು ಅವುಗಳನ್ನು ಅಲ್ಲಿಂದ ಹೊರ ತೆಗೆಯಲು ಮುಂದಾಗಿದ್ದರೂ ಸಾಧ್ಯವಾಗಲಿಲ್ಲ. ಸೋಮವಾರ ಮತ್ತೆ ಪ್ರಯತ್ನಿಸಿದರು.

ಹಗ್ಗ, ಟ್ಯೂಬ್‌ ಮೂಲಕ ಇಳಿದು ನಾಯಿಗಳನ್ನು ಹೊರತರಲು ಮುಂದಾದರು. ನಾಯಿಗಳ ಮನವೊಲಿಸುವ ಮೂಲಕ ಹಗ್ಗದ ಸಹಾಯದಿಂದ ಮೇಲೆ ತಂದರು. ಒಂದೂವರೆ ವರ್ಷದಿಂದ ಬಂಧನದಲ್ಲಿದ್ದ ಶ್ವಾನಗಳಿಗೆ ಆರಂಭದಲ್ಲಿ ನಡೆದಾಡಲು ಕಷ್ಟಪಟ್ಟವು. ಸ್ವಲ್ಪ ಸಮಯದ ಬಳಿಕ ಸಹಜ ಸ್ಥಿತಿಗೆ ಬಂದಿವೆ. ಈಶ್ವರ್‌ ಮಲ್ಪೆ ಅವರ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

Scroll to Top