ಕಾಪು: ಬಿಪರ್‌ಜಾಯ್ ಚಂಡ ಮಾರುತದ ಅಬ್ಬರದಿಂದಾಗಿ ಕಾಪುವಿನಲ್ಲೂ ಕಡಲು ಪ್ರಕ್ಷ್ಯಬ್ಧಗೊಂಡಿದೆ. ಕಾಪು ಬೀಚ್, ಲೈಟ್ ಹೌಸ್ ಸುತ್ತಮುತ್ತ, ಉಚ್ಚಿಲ, ಮೂಳೂರು, ಪೊಲಿಪು, ಉಳಿಯಾರಗೋಳಿ ಯಾರ್ಡ್ ಬೀಚ್ ಮತ್ತು ಕೈಪುಂಜಾಲ್ ಬೀಚ್‌ಗಳಲ್ಲಿಯೂ ಬೃಹತ್ ಅಲೆಗಳು ಏಳುತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಲೈಟ್ ಹೌಸ್ ಬಳಿ ಸಮುದ್ರ ದೊಡ್ಡದಾಗಿದ್ದು ಬೃಹತ್ ಅಲೆಗಳು ಮೇಲೇಳುತ್ತಾ ದಡವನ್ನು ತನ್ನ ಒಡಲಿನತ್ತ ಸೇರಿಸಿಕೊಳ್ಳುತ್ತಿದೆ. ಈಗಾಗಲೇ 20 ಮೀಟರ್‌ನಷ್ಟು ಕಡಲು ವಿಸ್ತಾರಗೊಂಡಿದ್ದು ಬೃಹತ್ ಅಲೆಗಳು ಲೈಟ್ ಹೌಸ್ ಸುತ್ತಲಿನ ಬಂಡೆಗೆ ಅಪ್ಪಳಿಸಿ, ಆತಂಕ ಹೆಚ್ಚಿಸಿವೆ.
ಕಾಪು ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಲೈಟ್ ಹೌಸ್‌ನ ಬಲ ಬದಿಯಲ್ಲಿ ಸುಮಾರು 150 ಮೀಟರ್‌ವರೆಗೆ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ರೋಪ್‌ಗಳನ್ನು ಕಟ್ಟಲಾಗಿದ್ದು, ಪ್ರವಾಸಿಗರು ರೋಪ್‌ನ ಹಿಂದೆ ನಿಂತು ಸಮುದ್ರದ ಅಬ್ಬರ ವೀಕ್ಷಿಸುತ್ತಿದ್ದಾರೆ.
ಕಾಪು ಪೊಲೀಸ್ ಸಿಬ್ಬಂದಿ, ಗೃಹರಕ್ಷಕದಳದ ಸಿಬಂದಿ, ಜೀವರಕ್ಷಕ ದಳದ ಸಿಬಂದಿಗಳು ಬೀಚ್‌ನಲ್ಲಿ ಕಣ್ಗಾವಲು ಇಟ್ಟಿದ್ದು ಯಾರೂ ಸಮುದ್ರಕ್ಕೆ ಇಳಿಯದಂತೆ, ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಪ್ರವಾಸಿಗರು ಕೂಡಾ ಈ ಬಗ್ಗೆ ಎಚ್ಚರ ವಹಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.