ಕರಾವಳಿಯಲ್ಲಿ ಬಿಪರ್‌ಜಾಯ್‌ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು

ಮಂಗಳೂರು: ರಾಜ್ಯದಲ್ಲಿ ಇನ್ನೂ ಮಳೆ ಬಿರುಸು ಪಡೆದಿಲ್ಲ. ಆದರೆ ಕರಾವಳಿಯಲ್ಲಿ ಬಿಪರ್‌ಜಾಯ್‌ ಚಂಡಮಾರುತದ ಅಬ್ಬರಕ್ಕೆ ಕಡಲ್ಕೊರೆತ ತೀವ್ರಗೊಂಡಿದೆ. ಮಳೆ ಬರುವುದಕ್ಕೆ ಮೊದಲೇ ಚಂಡಮಾರುತ ಕಾಣಿಸಿದ್ದರಿಂದ ಕಡಲು ಅಬ್ಬರಿಸತೊಡಗಿದ್ದು, ತೀರ ಪ್ರದೇಶದ ನಿವಾಸಿಗಳು ಆತಂಕದಲ್ಲಿ ಕಾಲ ತಳ್ಳುತ್ತಿದ್ದಾರೆ.

ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದ ಪರಿಣಾಮ ಕಡಲು ಮಾತ್ರ ಭೋರ್ಗರೆಯುತ್ತ ಬರುತ್ತಿದ್ದು, ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದಾಗಿ ಮಂಗಳೂರು ಹೊರವಲಯದ ಉಳ್ಳಾಲದ ಬಟ್ಟಂಪಾಡಿ, ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ತೀರದಲ್ಲಿರುವ ಮನೆಗಳು ಸಮುದ್ರ ಸೇರುತ್ತಿವೆ. ನೂರಾರು ತೆಂಗಿನ ಮರಗಳು ಧರಾಶಾಯಿ ಆಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಈ ಭಾಗದಲ್ಲಿ ಕಡಲ್ಕೊರೆತ ಪ್ರತಿ ಬಾರಿ ಕಾಣಿಸಿಕೊಳ್ಳುವ ಸಮಸ್ಯೆ. ಮಳೆ ಜೋರಾದರೆ, ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡರೆ, ಕರಾವಳಿಯ ಕೆಲವು ಪ್ರದೇಶಗಳು ಟಾರ್ಗೆಟ್ ಆಗುತ್ತವೆ. ಕಡಲ ರಾಜನ ಅಬ್ಬರಕ್ಕೆ ಭೂಪ್ರದೇಶ ಕೊಚ್ಚಿ ಹೋಗುತ್ತಿದ್ದು, ಅಲ್ಲಿನ ಮನೆಗಳು ಸಮುದ್ರಕ್ಕೆ ಆಹುತಿಯಾಗುತ್ತಿವೆ.

You cannot copy content from Baravanige News

Scroll to Top