ಉಡುಪಿ : ಎರಡು ವರ್ಷಗಳ ಹಿಂದೆ ನಡೆದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ತಂದೆ ಹಾಗೂ ಮಗನಿಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಉಡುಪಿ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿನ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ದಾವಣಗೆರೆ ಮೂಲದ ಶಿವಶಂಕರ್ (58) ಹಾಗೂ ಆತನ ಮಗ ಸಚಿನ್ (28) ಶಿಕ್ಷೆಗೆ ಗುರಿಯಾದ ಆರೋಪಿಗಳು.
14 ವರ್ಷದ ನೊಂದ ಬಾಲಕಿ ತನ್ನ ತಾಯಿ ಜತೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಅದೇ ಮನೆಯಲ್ಲಿ ತಾಯಿಯ ಸ್ನೇಹಿತ ಶಿವಶಂಕರ್ ಕೂಡ ವಾಸವಾಗಿದ್ದ. ಲಾಕ್‌ಡೌನ್ ಸಮಯದಲ್ಲಿ 2020ರ ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಬೆಳಗಿನ ಜಾವ 5 ಗಂಟೆಗೆ ಬಾಲಕಿಯನ್ನು ಮನೆಯಲ್ಲಿ ಬಿಟ್ಟು ತಾಯಿ ಕೆಲಸಕ್ಕೆ ಹೋಗುತ್ತಿದ್ದರು. ಆ ಸಮಯದಲ್ಲಿ ಶಿವಶಂಕರ್ ಬಾಲಕಿಯನ್ನು ಹಲವು ಬಾರಿ ದೈಹಿಕ ಸಂಪರ್ಕ ಮಾಡಿರುವುದಾಗಿ ದೂರಲಾಗಿದೆ. ಶಿವಶಂಕರ್ ಮಗ ಸಚಿನ್, ಕೂಡ ಮನೆಯಲ್ಲಿ ಬಾಲಕಿ ಒಬ್ಬಳೇ ಇರುವಾಗ ಮೇ ತಿಂಗಳಲ್ಲಿ ಅತ್ಯಾಚಾರ ಎಸಗಿದ್ದ. ಈ ವಿಚಾರವನ್ನು ಬಾಲಕಿ ನೆರೆಮನೆಯವರಲ್ಲಿ ಹೇಳಿ ಕೊಂಡಿದ್ದಳು. ನೆರೆಮನೆ ಮಹಿಳೆ ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದರು.
ಆಗಿನ ಮಕ್ಕಳ ರಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಅವರು ಬಾಲಕಿಯನ್ನು ರಕ್ಷಿಸಿ ಆರೋಪಿಗಳ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಆಗಿನ ಉಡುಪಿ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಜಯಂತ್ ಎಂ. ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
22 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಲಯದಲ್ಲಿ ನಡೆಸಲಾಯಿತು. ಬಾಲಕಿಯ ತಾಯಿ ಅಭಿಯೋಜನೆ ವಿರುದ್ಧ ಸಾಕ್ಷಿ ನುಡಿದಿದ್ದರೂ, ಕೂಡ ಬಾಲಕಿಯ ಸಾಕ್ಷಿ ಮತ್ತು ಇತರ ಸಾಂದರ್ಭಿಕ ಸಾಕ್ಷ್ಯವನ್ನು ಪರಿಗಣಿಸಿ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅತ್ಯಾಚಾರ ಪ್ರಕರಣದಡಿ ಇಬ್ಬರು ಆರೋಪಿಗಳಿಗೆ ತಲಾ 10 ವರ್ಷ ಜೈಲುಶಿಕ್ಷೆ, 10 ಸಾವಿರ ರೂ. ದಂಡ, ಪೋಕ್ಸೋ ಕಲಂನಡಿ ತಲಾ 20 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ಮತ್ತು ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷಗಳ ಹೆಚುವರಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ದಂಡ 40 ಸಾವಿರ ರೂ.ನಲ್ಲಿ 30 ಸಾವಿರ ರೂ. ನೊಂದ ಬಾಲಕಿಗೆ ಪರಿಹಾರ ಮತ್ತು 10 ಸಾವಿರ ರೂ. ಸರಕಾರಕ್ಕೆ ಪಾವತಿಸುವಂತೆ ಹಾಗೂ ಹೆಚ್ಚುವರಿ ಪರಿಹಾರವಾಗಿ ನೊಂದ ಬಾಲಕಿಗೆ 3 ಲಕ್ಷ ರೂ. ಸರಕಾರದಿಂದ ನೀಡುವಂತೆ ಆದೇಶಿಸಲಾಗಿದೆ. ಆ ಮೊತ್ತವನ್ನು ಬಾಲಕಿಯ ಹೆಸರಿನಲ್ಲಿ ಠೇವಣಿ ಇಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರ ಉಡುಪಿ ಪೊಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.