ಆನ್‌ಲೈನ್ ವಂಚನೆ ಜಾಲ ‘ಪಿಂಕ್ ವಾಟ್ಸಾಪ್’ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಚ್ಚರಿಕೆ

ಉಡುಪಿ, ಜೂ.16: ಆನ್‌ಲೈನ್ ವಂಚನೆ ಜಾಲ ‘ಪಿಂಕ್ ವಾಟ್ಸಾಪ್’ ಬಗ್ಗೆ ಎಚ್ಚರ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ನಿರ್ದೇಶನ ನೀಡಿದೆ.

ಹೆಚ್ಚುವರಿ ಫ್ಯೂಚರ್ಸ್‌ಗಳೊಂದಿಗೆ ಹೊಸ ಪಿಂಕ್ ರೂಪದಲ್ಲಿ ವಾಟ್ಸಾಪ್‌ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ಅಗತ್ಯವಾಗಿ ಪ್ರಯತ್ನಿಸಿ ಎಂಬುದಾಗಿ ಲಿಂಕ್‌ನೊಂದಿಗೆ ಎಸ್‌ಎಂಎಸ್ ಸಂದೇಶವು ಮೊಬೈಲ್‌ಗಳಿಗೆ ಬರುತ್ತಿದ್ದು, ಇದನ್ನು ನಂಬಿ ಸಾಕಷ್ಟು ಮಂದಿ ಈ ಲಿಂಕ್ ಒತ್ತಿ ನಕಲಿ ಪಿಂಕ್ ವಾಟ್ಸಾಪ್‌ ಅನ್ನು ಇನ್‌ಸ್ಟಾಲ್ ಮಾಡುತ್ತಿದ್ದಾರೆ.

ಪಿಂಕ್ ವಾಟ್ಸಾಪ್ ಇನ್‌ಸ್ಟಾಲ್ ಮಾಡಿಕೊಂಡ ಪರಿಣಾಮ ಹ್ಯಾಕರ್ಸ್‌ಗಳು ಮೊಬೈಲ್‌ನಲ್ಲಿರುವ ಫೋಟೋಗಳು, ಕಾಂಟಾಕ್ಟ್‌ಗಳು, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಎಸ್‌ಎಂಎಸ್‌ಗಳು ಸೇರಿದಂತೆ ಎಲ್ಲ ರೀತಿಯ ಮಾಹಿತಿಗಳನ್ನು ಕದಿಯಬಹುದು. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಬೇಡಿ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಮ್ಮ ಹೇಳಿಕೆಯಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಒಂದು ವೇಳೆ ಪಿಂಕ್ ವಾಟ್ಸಾಪ್ ಇನ್‌ಸ್ಟಾಲ್ ಮಾಡಿದ್ದರೆ ಅದನ್ನು ಕೂಡಲೇ ಅನ್ ‌ಇನ್‌ಸ್ಟಾಲ್ ಮಾಡಬೇಕು. ಎಲ್ಲ ವಾಟ್ಸಾಪ್ ವೆಬ್ ಸಾಧನಗಳನ್ನು ಅನ್ ಲಿಂಕ್ ಮಾಡಬೇಕು. ಸೆಟ್ಟಿಂಗ್ ‌ಗಳಿಂದ ಬ್ರೌಸರ್ ಸಂಗ್ರಹವನ್ನು ತೆರವುಗೊಳಿಸಬೇಕು. ಎಲ್ಲ ಅಪ್ಲಿಕೇಶನ್‌ಗಳಿಗೆ ಅನುಮತಿಯನ್ನು ಪರಿಶೀಲಿಸಬೇಕು. ಯಾವುದೇ ಅಪ್ಲಿಕೇಶನ್ ಗೆ ಯಾವುದೇ ಅನುಮಾನಾಸ್ಪದ ಅನುಮತಿ ಕಂಡು ಬಂದಲ್ಲಿ ಅದನ್ನು ಹಿಂಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.

You cannot copy content from Baravanige News

Scroll to Top