`ಗ್ಯಾರಂಟಿ’ಗೆ ಅರ್ಜಿ ಸಲ್ಲಿಸುವ ಮುನ್ನ ಹುಷಾರ್ : ಸೈಬರ್ ಕಳ್ಳರಿದ್ದಾರೆ ಎಚ್ಚರ.!!

ಬೆಂಗಳೂರು : ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಫಲಾನುಭವಿಗಳು ಎಚ್ಚರಿಕೆ ವಹಿಸಬೇಕು. ಯಾಕೆಂದ್ರೆ ಅರ್ಜಿ ಸಲ್ಲಿಕೆ ಮಾಡುವವರ ಮಾಹಿತಿಗೆ ಕನ್ನ ಹಾಕಲು ಸೈಬರು ಕಳ್ಳರು ಕಾಯುತ್ತಿದ್ದಾರೆ ಎನ್ನುವ ಶಾಕಿಂಗ್ ಸುದ್ದಿ ನೀಡುವ ಮೂಲಕ ಸೈಬರ್ ತಜ್ಞರು ಎಚ್ಚರಿಕೆ ರವಾನಿಸಿದ್ದಾರೆ.

ಗ್ಯಾರಂಟಿಗೆ ಅರ್ಜಿ ಸಲ್ಲಿಕೆ ಮಾಡುವ ಮುನ್ನಾ ಎಚ್ಚರವಾಗಿರಿ. ಅರ್ಜಿ ಸಲ್ಲಿಕೆಗೆ ಸೇವಾಸಿಂಧು ಪೋರ್ಟಲ್ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಈಗ ಫೇಕ್ ಲಿಂಕ್‌ಗಳನ್ನು ಹರಿಯಬಿಡುತ್ತಿದ್ದಾರೆ. ಅಪ್ಪಿ ತಪ್ಪಿ ಈ ಲಿಂಕ್ ಕ್ಲಿಕ್ ಮಾಡಿ, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ, ಬ್ಯಾಂಕ್‌ನಲ್ಲಿರುವ ದುಡ್ಡು ಸೈಬರ್ ಚೋರರ ಪಾಲಾಗೋದು ಖಚಿತ. ಹೀಗಾಗಿ ಜನ ತುಂಬಾ ಎಚ್ಚರಿಕೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಸಿಕ್ಕ ಸಿಕ್ಕ ಲಿಂಕ್‌ಗಳಲ್ಲಿ ಸಲ್ಲಿಕೆ ಮಾಡಬಾರದು ಎನ್ನುವ ಎಚ್ಚರಿಕೆಯನ್ನು ರವಾನೆ ಮಾಡಿದ್ದಾರೆ.

ಸರ್ಕಾರ ಕೂಡ ಈ ವಿಚಾರದಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು. ಇಲ್ಲದೇ ಇದ್ರೆ ಜನರಿಗೆ ತೊಂದರೆಯಾಗಲಿದೆ. ಈಗಾಗಲೇ ಸಾಕಷ್ಟು ಫೇಕ್ ಲಿಂಕ್‌ಗಳ ಜಾಲ ಕೂಡ ಹರಿದಾಡುತ್ತಿದೆ ಎಂದು ಸೈಬರ್ ತಜ್ಞರಾದ ಶುಭ ಮಂಗಳಾ ಎಚ್ಚರಿಸಿದ್ದಾರೆ.

ಈಗಾಗಲೇ ಅರ್ಜಿ ಸಲ್ಲಿಕೆ ಎಲ್ಲೆಲ್ಲಿ ಮಾಡಬಹುದು, ಯಾವ ಲಿಂಕ್‌ನಲ್ಲಿ ಮಾಡಬೇಕು ಎನ್ನುವುದನ್ನು ಸರ್ಕಾರ ಪ್ರಕಟಿಸಿದೆ. ಹೀಗಾಗಿ ಜನ ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ತಿಳಿಸಿದ್ದಾರೆ.

You cannot copy content from Baravanige News

Scroll to Top