ಹೆಣ್ಣು ಮಕ್ಕಳಿಗೆ ಬಸ್ ಫ್ರೀ ಎಫೆಕ್ಟ್ : ಚಾಕ್ಲೇಟ್ ವಿಚಾರವಾಗಿ ಗದರಿದ ಅಪ್ಪ ; ಬಸ್ ಏರಿ ಧರ್ಮಸ್ಥಳಕ್ಕೆ ಹೋದ ಬಾಲಕಿಯರು..!!!

ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ‌ಯ ಅವಾಂತರ ಒಂದಲ್ಲ ಎರಡಲ್ಲ. ಬಸ್ಸಿನಲ್ಲಿ ಸೀಟಿಗಾಗಿ ನಾರಿಯರ ಗಲಾಟೆ ಒಂದೆಡೆಯಾದರೆ ಇನ್ನೊಂದೆಡೆ ಚಿಕ್ಕಪುಟ್ಟ ವಿಷಯಕ್ಕೆಲ್ಲ ಬೇಜಾರ್ ಮಾಡಿಕೊಂಡು ಮಕ್ಕಳು ಬಸ್ ಏರುತ್ತಿದ್ದಾರೆ.

ಹೌದು.., ಉಚಿತ ಬಸ್ ವ್ಯವಸ್ಥೆಯು ಹೆಣ್ಮಕ್ಕಳ ಪೋಷಕರಲ್ಲಿ ಕೊಂಚ ತಲೆನೋವು ತಂದಿದೆ. ಇದೀಗ ಕ್ಷುಲ್ಲಕ ಕಾರಣಕ್ಕೆ ಹೈಸ್ಕೂಲ್ ವಿದ್ಯಾರ್ಥಿನಿಯರು ಕಣ್ಮರೆಯಾಗಿದ್ದ ಪೋಷಕರಿಗೆ ಆತಂಕ ಸೃಷ್ಟಿಸಿದ್ದಾರೆ.

ಏನಿದು ಅವಾಂತರ.!??

ಎರಡು ದಿನಗಳ ಹಿಂದೆ ಅಂಗಡಿಗೆ ಹೋಗಿದ್ದ ಬಾಲಕಿಯರಿಬ್ಬರು ನಾಪತ್ತೆ ಆಗಿದ್ದರು. ಬಾಲಕಿಯರು ದಿಢೀರ್ ಕಣ್ಮರೆ ಆಗಿದ್ದರಿಂದ ಆತಂಕಗೊಂಡ ಪೋಷಕರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವೇಳೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

ಅಂತೆಯೇ ಪೊಲೀಸ್ ತನಿಖೆಯ ವೇಳೆ ನಾಪತ್ತೆ ಆಗಿರೋ ಬಾಲಕಿಯರು ಧರ್ಮಾಸ್ಥಳದಲ್ಲಿರೋ ಮಾಹಿತಿ ಲಭಿಸುತ್ತದೆ. ಧರ್ಮಸ್ಥಳಕ್ಕೆ ಹೋದ ಕೋಣನಕುಂಟೆ ಪೊಲೀಸರು ಬಾಲಕಿಯರನ್ನು ಪತ್ತೆ ಮಾಡಿದ್ದಾರೆ. ಇದೀಗ ಬಾಲಕಿಯರ ಪತ್ತೆ ಬಳಿಕ ವಿಚಾರಿಸಿದಾಗ ನಾಪತ್ತೆ ಹಿಂದಿನ ಅಸಲಿ ಸತ್ಯ ಬಯಲಾಗಿದೆ.

ಅಸಲಿ ಸತ್ಯ ಏನು..?

ಒಬ್ಬಳು 10ನೇ ತರಗತಿ ಇನ್ನೊಬ್ಬಳು 9 ನೇ ತರಗತಿ ಓದುತ್ತಿದ್ದು, ಇಬ್ಬರು ಸಹೋದರಿಯರಾಗಿದ್ದಾರೆ. ಈ ಇಬ್ಬರು ಅಂಗಡಿಗೆ ತೆರಳಿ ಚಾಕ್ಲೇಟ್ ಖರೀದಿಸಿ ತಿಂದಿದ್ದಾರೆ. ನಂತರ ತಂದೆಗೆ ಕರೆ ಮಾಡಿ ಅಂಗಡಿಯಿಂದ ಚಾಕ್ಲೇಟ್ ಖರೀದಿಸಿ ತಿಂದಿದ್ದೇವೆ. ಅಂಗಡಿಯವರಿಗೆ ಚಾಕ್ಲೇಟ್ ಹಣ ಕೊಡಿ ಎಂದು ಹೇಳಿದ್ದಾರೆ. ಈ ವೇಳೆ ತಂದೆ, ತಮ್ಮ ಅನುಮತಿಯಿಲ್ಲದೇ ಅಂಗಡಿಗೆ ಹೋಗಿದ್ದಕ್ಕೆ ಮಕ್ಕಳಿಗೆ ಬೈದಿದ್ದಾರೆ. ಅಲ್ಲದೆ ನಾನು ಹಣ ಕೊಡಲ್ಲ ಎಂದು ಸಿಟ್ಟು ಮಾಡಿಕೊಂಡಿದ್ದಾರೆ.

ತಂದೆ ಕೋಪದಿಂದ ಬೆದರಿದ ಬಾಲಕಿಯರು ತಮ್ಮ ಕೈಯಲ್ಲಿ ಹಣವಿಲ್ಲದಿದ್ದರೂ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಸದ್ಯ ನಾಪತ್ತೆ ಆಗಿದ್ದ ಬಾಲಕಿಯರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

Scroll to Top