ಉಡುಪಿ : ಮಣ್ಣಿನ ರಕ್ಷಣೆಯ ಕುರಿತು ಜಾಗೃತಿ ಮಾಡುವ ಸಲುವಾಗಿ ಯುವಕನೊಬ್ಬ ಭಾರತ ಯಾತ್ರೆ ಕೈಗೊಂಡಿದ್ದಾರೆ. ಇನ್ನೂ 17ರ ಹರೆಯದ ಈ ಯುವಕ ಈಗಾಗಲೇ ಸಾವಿರಾರು ಕಿಲೋಮೀಟರ್ ಸಂಚರಿಸಿ ಉಡುಪಿಗೆ ಬಂದು ತಲುಪಿದ್ದಾರೆ.ಸಾಹಿಲ್ ಅವರು ಏಕಾಂಗಿಯಾಗಿ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಒಟ್ಟು ಎರಡು ವರ್ಷಗಳ ಕಾಲ ಅವರ ಈ ಸುಧೀರ್ಘ ಯಾತ್ರೆ ನಡೆಯಲಿದೆ. ಸದ್ಯ 6 ತಿಂಗಳ ಯಾತ್ರೆ ಪೂರೈಸಿದ್ದು ಇನ್ನೂ 18 ತಿಂಗಳು ದೇಶ ಸುತ್ತುವುದು ಬಾಕಿ ಇದೆ.ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಗುಜರಾತ್ ಸಹಿತ ದೇಶದ ಬಾಕಿ ಉಳಿದ ಎಲ್ಲಾ ರಾಜ್ಯಗಳನ್ನು ಸಂದರ್ಶಿಸಿ ಬಳಿಕ ಕೊಲ್ಕತ್ತಾದಲ್ಲಿ ಈ ಭಾರತ ದರ್ಶನ ಯಾತ್ರೆ ಸಮಾಪನಗೊಳ್ಳಲಿದೆ.ಉಡುಪಿ ಸಂಚಾರದ ವೇಳೆ ಮಣಿಪಾಲದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜು, ಆನಂದತೀರ್ಥ ವಿದ್ಯಾಲಯ, ಇನಾಯತ್ ಆರ್ಟ್ ಗ್ಯಾಲರಿ ಮೊದಲಾದ ಸ್ಥಳಗಳಿಗೆ ಸಾಹಿಲ್ ಭೇಟಿ ನೀಡಿ ಮಣ್ಣಿನ ರಕ್ಷಣೆಯ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ.