ಮಲ್ಪೆ ಬೀಚ್‌ನಲ್ಲಿ ಗಂಗಾ ದೇವಿಯ ಕೂದಲು..!!!

ಮಲ್ಪೆ, ಜೂ.20: ಬಿಪರ್‌ಜಾಯ್‌ ಚಂಡಮಾರುತದಿಂದ ಕಡಲು ಪ್ರಕ್ಷುಬ್ಧಗೊಂಡಿದ್ದು ಭಾರೀ ಗಾತ್ರದ ಅಲೆಗಳು ಏಳುತ್ತಿದ್ದು ಪರಿಣಾಮ ಅಗಾಧ ಪ್ರಮಾಣದಲ್ಲಿ ಅಪರೂಪದ ಬಿಳಿ ಬಣ್ಣದ ತ್ಯಾಜ್ಯ ಮಲ್ಪೆ ಬೀಚ್‌ ತೀರಕ್ಕೆ ರವಿವಾರ ತೇಲಿ ಬಂದಿದೆ.

ಶ್ಯಾವಿಗೆ ರೀತಿಯಲ್ಲಿರುವ ಎಳೆ ಎಳೆಯಾದ ಬಿಳಿ ಬಣ್ಣದ ಈ ಕಸದ ರಾಶಿಯನ್ನು ಸ್ಥಳೀಯರು ಗಂಗಾದೇವಿಯ ಕೂದಲು ಎಂದು ಕರೆಯುತ್ತಾರೆ. ಇದು ಸುಮಾರು 10 ವರ್ಷದ ಹಿಂದೆ ಕಾಣಸಿಗುತ್ತಿದ್ದು, ಈ ಬಾರಿ ಯಥೇಚ್ಚವಾಗಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಇದನ್ನು ತೆರವುಗೊಳಿಸುವ ಹಾಗಿಲ್ಲ, ಜೋರಾದ ಅಲೆಗೆ ಮತ್ತೆ ಸಮುದ್ರವನ್ನು ಸೇರಿಕೊಳ್ಳುತ್ತದೆ. ಇದು ಸಮುದ್ರದಲ್ಲಿ ಕೊಳೆತು ಮೀನುಗಳಿಗೆ ಆಹಾರವಾಗುತ್ತದೆ. 10 ವರ್ಷಗಳ ಹಿಂದೆ ಕಡಲತೀರದಲ್ಲಿ ಕಂಡ ಬಂದ ಗಂಗಾದೇವಿಯ ಕೂದಲು ಎನ್ನಲಾದ ಈ ರಾಶಿಯಲ್ಲಿ ಒಂದೇ ಒಂದು ಪ್ಲಾಸ್ಟಿಕ್‌ ಬಾಟಲಿ ಕಾಣ ಸಿಕ್ಕಿರಲಿಲ್ಲ. ಆದರೆ ಇದೀಗ ಇದರಲ್ಲಿ ಲಾರಿಗಟ್ಟಲೆ ಪ್ಲಾಸ್ಟಿಕ್‌ ಬಾಟಲಿ ಕಂಡು ಬರುವುದು ವಿಪರ್ಯಾಸ ಎನ್ನುತ್ತಾರೆ ಸ್ಥಳೀಯರಾದ ಶಂಕರ್‌ ಕೊಳ ಅವರು.

ಸಮುದ್ರದ ಒಡಲು ಸೇರಿದ ಕಸಕಡ್ಡಿಗಳು, ಪ್ಲಾಸ್ಟಿಕ್‌ ತ್ಯಾಜ್ಯಗಳು, ಬಲೆ, ವಾಹನ ಟಯರ್‌, ಕಡಲ ಉಬ್ಬರದಿಂದಾಗಿ ಅತ್ಯಧಿಕ ಪ್ರಮಾಣದಲ್ಲಿ ದಡ ಸೇರಿದೆ. ಇದೊಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಮಳೆಗಾಲದಲ್ಲಿ ಮಾತ್ರ ಸಂಭವಿಸುತ್ತವೆ. ಹುಣ್ಣಿಮೆ ಮತ್ತು ಅಮಾವಾಸ್ಯೆ ಸಂದರ್ಭದಲ್ಲಿರುವ ಉಬ್ಬರದ ನೀರು ಕಸದ ರಾಶಿಯನ್ನೇ ಸಮುದ್ರತೀರಕ್ಕೆ ತಂದು ಹಾಕುತ್ತದೆ. ರವಿವಾರ ಅಮಾವಾಸ್ಯೆಯಾದ್ದರಿಂದ ಸಮುದ್ರದ ಒತ್ತಡ ದಿಂದಾಗಿ ಕಸದ ರಾಶಿ ಬಿದ್ದಿದೆ ಎನ್ನಲಾಗಿದೆ.

ಪ್ಲಾಸ್ಟಿಕ್‌ ಬಾಟಲಿಗಳು, ಚಪ್ಪಲಿಗಳು ,ತಿಂಡಿ ಪೊಟ್ಟಣಗಳು, ಬಳಸಿ ಬಿಸಾಡಿದ ಮೀನಿನ ಬಲೆಗಳು, ರೋಪ್‌ಗಳಿಂದ ಸಮುದ್ರ ಮಲಿನಗೊಳ್ಳುತ್ತಿದ್ದು ಈಗಂತೂ ಸಮುದ್ರದಲ್ಲಿ ತ್ಯಾಜ್ಯ ರಾಶಿ ದಿನೇ ದಿನೇ ಲೋಡುಗಟ್ಟಲೆ ಹೆಚ್ಚುತ್ತಿದೆ. ಇದು ಸಮುದ್ರ ಜೀವಿಗಳ ಜೀವಕ್ಕೆ ಕುತ್ತು ತರುತ್ತಿರುವುದು ಅಘಾತಕಾರಿ ವಿಷಯವಾಗಿದೆ. ವಿಷಕಾರಿ ತ್ಯಾಜ್ಯದಿಂದ ತೀರದಲ್ಲಿ ನಡೆಸುವ ಸಾಂಪ್ರದಾಯಿಕ ಮೀನುಗಾರಿಕೆಗೂ ತೊಂದರೆಯಾಗಲಿದೆ. ಈ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಮಂಜು ಕೊಳ ಹೇಳಿದ್ದಾರೆ

You cannot copy content from Baravanige News

Scroll to Top