ಗ್ಯಾರಂಟಿ ಯೋಜನೆಗಳ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಫಲಾನುಭವಿಗಳಾಗಲು ಜನರು ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ. ಆದರೆ ಎಲ್ಲೆಡೆ ಸರ್ವರ್ ಡೌನ್ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಸತೀಶ್ ಜಾರಕಿಹೊಳಿ ಸರ್ವರ್ ಡೌನ್ ಆಗಲು ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಾವು ಮೊದಲೇ ಈ ಬಗ್ಗೆ ಯೋಚನೆ ಮಾಡಿದ್ದೆವು. ನಮ್ಮ ಸಿಸ್ಟಂಗಳನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಈ ಹಿಂದೆ ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಿದ್ದಾರೋ ಈಗ ಸಿಸ್ಟಂಗಳನ್ನೂ ಹಾಗೆಯೇ ಹ್ಯಾಕ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಹ್ಯಾಕ್ ಮಾಡಿರುವ ಸಿಸ್ಟಂಗಳನ್ನು ನಾವು ಮುಂದಿನ ದಿನಗಳಲ್ಲಿ ರಿಪೇರಿ ಮಾಡುತ್ತೇವೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಜಾರಿ ಆಗುವುದು ಸ್ವಲ್ಪ ತಡವಾಗುತ್ತಿದೆ. ನಾವು ಮ್ಯಾನುವಲ್ ಆಗಿ ಕೈಯಿಂದಲೇ ಅರ್ಜಿಗಳನ್ನು ತೆಗೆದುಕೊಳ್ಳುತ್ತೇವೆ. 1 ತಿಂಗಳು ಯೋಜನೆ ಜಾರಿ ತಡವಾಗಬಹುದು. ಅದಕ್ಕಿಂತ ಹೆಚ್ಚಿನದು ಏನೂ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.