65 ವರ್ಷ ಮೇಲ್ಪಟ್ಟವರಿಗೆ ಮುಜರಾಯಿ ಇಲಾಖೆ ಅಡಿಯ ದೇಗುಲಗಳಲ್ಲಿ ಶೀಘ್ರ ದರ್ಶನ

ಬೆಂಗಳೂರು : ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಡುವ ಪ್ರವರ್ಗ ‘ಎ’ ಮತ್ತು ‘ಬಿ’ ದೇವಸ್ಥಾನಗಳಲ್ಲಿ 65 ವರ್ಷ ಮೇಲ್ಪಟ್ಟ ಭಕ್ತಾದಿಗಳಿಗೆ ಇನ್ನು ಮುಂದೆ ದೇವರ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಧಾರ್ಮಿಕ ದತ್ತಿ ಇಲಾಖೆ ಬುಧವಾರ ಈ ಸಂಬಂಧ ಸುತ್ತೋಲೆಯೊಂದನ್ನು ಹೊರಡಿಸಿದೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ್ದ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ–ಆಗಮಿಕರ ಮತ್ತು ಉಪಾದಿವಂತರ ಒಕ್ಕೂಟದ ಸದಸ್ಯರು ಈ ಬಗ್ಗೆ ಮನವಿ ಸಲ್ಲಿಸಿದ್ದರು.

ಹಿರಿಯ ನಾಗರಿಕರಿಗೆ ಸರತಿ ಸಾಲಿನಲ್ಲಿ ನಿಂತುಕೊಳ್ಳುವುದು ಕಷ್ಟವಾಗುತ್ತಿದೆ. ಇವರು ತಮ್ಮ ವಯಸ್ಸಿನ ದಾಖಲೆ ಅಥವಾ ಆಧಾರ್‌ ಕಾರ್ಡ್‌ ಅನ್ನು ತೋರಿಸಿದರೆ, ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಸ್ಥಳಾವಕಾಶ ಇದ್ದರೆ ಪ್ರತ್ಯೇಕ ಸ್ಥಳ ಕಾಯ್ದಿರಿಸುವಂತೆಯೂ ಸೂಚಿಸಲಾಗಿದೆ.

ದೇವಾಲಯಗಳಲ್ಲಿ ಹಿರಿಯ ನಾಗರಿಕರಿಗಾಗಿ ಸಹಾಯ ಕೇಂದ್ರವನ್ನು ಸ್ಥಾಪಿಸಿ, ಜವಾಬ್ದಾರಿಯುತ ಸಿಬ್ಬಂದಿಯನ್ನು ನಿಯೋಜಿಸಿ ದೇವರ ದರ್ಶನದ ವ್ಯವಸ್ಥೆ ಮಾಡಬೇಕು ಎಂದೂ ಸುತ್ತೋಲೆ ಹೇಳಿದೆ. ಒಕ್ಕೂಟದ ಗೌರವ ಉಪಾಧ್ಯಕ್ಷರಾದ ಆರ್‌.ಲಕ್ಷ್ಮಿಕಾಂತ, ಎಸ್‌.ಆರ್‌.ಶೇಷಾದ್ರಿಭಟ್ಟರ್, ಮುಖ್ಯ ಪ್ರಧಾನಕಾರ್ಯದರ್ಶಿ ಕೆ.ಎಸ್‌.ಎನ್.ದೀಕ್ಷಿತ್‌ ಅವರು ಸಚಿವರನ್ನು ಭೇಟಿ ಮಾಡಿದ್ದರು.

Scroll to Top