ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ಹೋಗಿದ್ದ ಕೊಟ್ಯಾಧೀಶರು ಜೀವಂತ ಜಲಸಮಾಧಿಯಾಗಿದ್ದಾರೆ. ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.
ವಿಶ್ವದ ಶ್ರೀಮಂತರನ್ನು ಕರೆದೊಯ್ದಿದ್ದ ಸಬ್‌ಮರ್ಸಿಬಲ್ ಸಾಗರದ ಒಳಗಡೆ ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಸ್ಫೋಟಗೊಂಡಿದೆ ಎಂದು ತಿಳಿಸಿದೆ.
ಸಬ್‌ಮರ್ಸಿಬಲ್‌ನಲ್ಲಿದ್ದ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು. ನಿರಂತರ ಹುಡುಕಾಟದ ವೇಳೆ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಸಬ್‌ಮರ್ಸಿಬಲ್ ಅವಶೇಷಗಳು ಪತ್ತೆಯಾಗಿವೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಜಾನ್ ಮೌಗರ್ ತಿಳಿಸಿದ್ದಾರೆ.
ಈ ಕುರಿತು ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ ಸಹ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಕಂಪನಿಯ ಸಿಇಒ ಸ್ಟಾಕ್‌ಟನ್ ರಷ್ ಸೇರಿದಂತೆ ಸಬ್‌ಮಾರ್ಸಿಬಲ್‌ನಲ್ಲಿ ಸಂಚರಿಸಿದ್ದ ಎಲ್ಲ ಐದು ಮಂದಿ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ತಿಳಿಸಿದೆ.
ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ಸಬ್‌ಮರ್ಸಿಬಲ್‌ನಲ್ಲಿ ಹೋಗಿದ್ದ ಒಶಿಯನ್‌ಗೇಟ್ ಸಿಇಒ ಸ್ಟಾಕ್‌ಟನ್ ರಷ್, ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ ನಾರ್ಗಿಯೊಲೆಟ್, ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಭಾನುವಾರ ಕಣ್ಮರೆಯಾಗಿದ್ದರು. 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು. ಸಬ್‌ಮರ್ಸಿಬಲ್ ಹುಡುಕಾಟಕ್ಕಾಗಿ ವ್ಯಾಪಕ ಶೋಧ ನಡೆಸಲಾಗಿತ್ತು.