ಬ್ಯಾಂಕ್‍ಗಳ ವಿಲೀನ; ವಿಶ್ವದ ಮೌಲ್ಯಯುತ ಬ್ಯಾಂಕ್ ಆಗಿ ಹೊರಹೊಮ್ಮಿದ HDFC

ನವದೆಹಲಿ: ಗೃಹಸಾಲ ಮಾರುಕಟ್ಟೆಯ ಪ್ರಮುಖ ಕಂಪನಿ ಎಚ್‌ಡಿಎಫ್‌ಸಿ ಹಾಗೂ ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಲೀನದ ನಂತರ ವಿಶ್ವದ ಅತ್ಯಂತ ಮೌಲ್ಯಯುತ ಬ್ಯಾಂಕ್‍ಗಳಲ್ಲಿ ಹೆಚ್‍ಡಿಎಫ್‍ಸಿ ಬ್ಯಾಂಕ್‌ ಸ್ಥಾನ ಪಡೆಯಲಿದೆ.

ಎಚ್‌ಡಿಎಫ್‌ಸಿಯನ್ನು ಸ್ವಾಧೀನಪಡಿಸಿಕೊಳ್ಳಲು ಎಚ್‌ಡಿಎಫ್‌ಸಿ ಬ್ಯಾಂಕ್ ಹಿಂದಿನ ವರ್ಷದ ಏಪ್ರಿಲ್ 4ರಂದು ಒಪ್ಪಿಗೆ ನೀಡಿತ್ತು. ಜುಲೈ 1 ರಿಂದ ಈ ವಿಲೀನ ಅನ್ವಯವಾಗಲಿದ್ದು, ಹೊಸ ಹೆಚ್‍ಡಿಎಫ್‍ಸಿ ಬ್ಯಾಂಕ್ ಘಟಕವು ಸುಮಾರು 1.20 ಕೋಟಿ ಗ್ರಾಹಕರನ್ನು ಹೊಂದಿರಲಿದೆ. ಇದು ಜರ್ಮನಿಯ ಜನ ಸಂಖ್ಯೆಗಿಂತ ಹೆಚ್ಚಾಗಿದೆ. ಅಲ್ಲದೇ ಶಾಖೆಯ ನೆಟ್‍ವರ್ಕ್ 8,300 ಕ್ಕಿಂತಲೂ ಹೆಚ್ಚಾಗಲಿದೆ. 1,77,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಇದು ಒಳಗೊಳ್ಳಲಿದೆ.

ವಿಲೀನದ ನಂತರದ ಬ್ಯಾಂಕ್‌ ದೇಶದ ಹಣಕಾಸು ಸೇವಾ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಯಾಗಿ ಹೊರಹೊಮ್ಮಿದ್ದರೆ ವಿಶ್ವದಲ್ಲಿ ನಾಲ್ಕನೇಯ ದೊಡ್ಡ ಬ್ಯಾಂಕ್ ಆಗಲಿದೆ. ಜೆಪಿ ಮೋರ್ಗಾನ್ ಚೇಸ್ & ಕಂ., ಇಂಡಸ್ಟ್ರಿಯಲ್ ಮತ್ತು ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಲಿಮಿಟೆಡ್ ಮತ್ತು ಬ್ಯಾಂಕ್ ಆಫ್ ಅಮೇರಿಕಾ ಕಾರ್ಪೊರೇಷನ್ ಮಾರುಕಟ್ಟೆ ಬಂಡವಾಳದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನವನ್ನು ಪಡೆದಿದೆ.

ಜೂನ್ 22ರ ವೇಳೆಗೆ ಕ್ರಮವಾಗಿ ಸುಮಾರು 62 ಬಿಲಿಯನ್ ಡಾಲರ್ ಮತ್ತು 79 ಬಿಲಿಯನ್ ಡಾಲರ್ ಬಂಡವಾಳದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್‍ಗಳನ್ನು ಹೆಚ್‍ಡಿಎಫ್‍ಸಿ ಹಿಂದಿಕ್ಕಿದೆ.

ಈ ಬಗ್ಗೆ ಹಣಕಾಸು ಸೇವೆಗಳ ಸಂಶೋಧನೆಯ ಮುಖ್ಯಸ್ಥ ಸುರೇಶ್ ಗಣಪತಿಯವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. 18% ರಿಂದ 20% ರಷ್ಟು ಬೆಳವಣಿಗೆಯನ್ನು ನಿರೀಕ್ಷೆಯಲ್ಲಿದ್ದೇವೆ. ಗಳಿಕೆಯ ಬೆಳವಣಿಗೆಯಲ್ಲಿ ಉತ್ತಮ ಪ್ರಗತಿ ಇದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಹೆಚ್‍ಡಿಎಫ್‍ಸಿ ಶಾಖೆಗಳನ್ನು ದ್ವಿಗುಣಗೊಳಿಸಲು ಯೋಜಿಸಲಾಗಿದೆ. ವಿಲೀನದ ನಂತರವೂ ಸಹ ಬಲವಾದ ಸಾಲದ ಬೆಳವಣಿಗೆಯನ್ನು ಹೆಚ್‍ಡಿಎಫ್‍ಸಿ ನೀಡುತ್ತದೆ. ಬಳಿಕ ಷೇರು ದರಗಳು ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬೇರೆ ದೇಶದ ಬ್ಯಾಂಕುಗಳ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಕಹಿ ಸುದ್ದಿ ನೀಡಿದರೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಹೂಡಿಕೆದಾರರಿಗೆ ಸಿಹಿ ನೀಡಿದೆ. ಈ ವರ್ಷ ಜಾಗತಿಕ ಬ್ಯಾಂಕ್‌ಗಳ ಸೂಚ್ಯಂಕ 3.5% ಇಳಿಕೆಯಾಗಿದ್ದರೆ ಎಚ್‌ಡಿಎಫ್‌ಸಿ ಬ್ಯಾಂಕ್‌ ಹೂಡಿಕೆದಾರರಿಗೆ ಈ ವರ್ಷ 3.1% ನಷ್ಟು ಲಾಭವನ್ನು ನೀಡಿದೆ.

Scroll to Top