ರಾಜ್ಯ ಬಿಜೆಪಿಯಲ್ಲಿ ಇನ್ನೂ ವಿರೋಧ ಪಕ್ಷದ ನಾಯಕ ಯಾರೆಂದು ಆಯ್ಕೆ ಮಾಡಿಲ್ಲ. ಇದೇ ವಿಚಾರವನ್ನು ಇಟ್ಟುಕೊಂಡು ಗೇಲಿ ಮಾಡುತ್ತಿರುವ ಕರ್ನಾಟಕ ಕಾಂಗ್ರೆಸ್, ಇವತ್ತು ವಿಭಿನ್ನವಾಗಿ ಕಾಲೆಳೆದಿದೆ.
ಕುರ್ಚಿಯ ಫೋಟೋ ಒಂದನ್ನು ಹಾಕಿ ಗೇಲಿ ಮಾಡಿರುವ ಕಾಂಗ್ರೆಸ್, ‘ಇದು ಪ್ರಕಟಣೆ: ತುರ್ತಾಗಿ ಬೇಕಾಗಿದ್ದಾರೆ’ ಎಂದು ಹೆಡ್ಡರ್ ಹಾಕಿದೆ. ಅದರ ಅಡಿಯಲ್ಲಿ ಖಾಲಿ ಇರುವ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹುದ್ದೆಗೆ ಸೂಕ್ತ ವ್ಯಕ್ತಿ ಬೇಕಾಗಿದ್ದಾರೆ. ಅರ್ಹತೆ: ವಾಟ್ಸ್ಆ್ಯಪ್ ವಿವಿಯಲ್ಲಿ ಪದವಿ ಪಡೆದಿರಬಾರದು. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯ ತಿಳಿದಿರಬೇಕು. ಭ್ರಷ್ಟಾಚಾರ ಮಾಡಿರಬಾರದು ಎಂದು ಫೋಟೋ ಮೇಲೆ ಬರೆದಿದೆ.
ಷರತ್ತುಗಳು ಏನೇನು..?
ಇನ್ನು ಟ್ವಿಟರ್ನಲ್ಲ, ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ. ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ. ಸಿಡಿಗೆ ತಡೆಯಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಆರ್.ಎಸ್.ಎಸ್ ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ವಾಟ್ಸ್ಆ್ಯಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ ಎಂದು ಟ್ವೀಟ್ ಮಾಡಿದೆ.
ಇನ್ನೊಂದು ಟ್ವೀಟ್ನಲ್ಲಿ ಚುನಾವಣೆ ಮುಗಿದು 50ಕ್ಕೂ ಹೆಚ್ಚು ದಿನ ಕಳೆಯಿತು. ನಮ್ಮ ಸರ್ಕಾರ ರಚನೆ ಆಗಿ ತಿಂಗಳು ಕಳೆಯಿತು. ಮಂತ್ರಿಮಂಡಲವೂ ರಚನೆಯಾಯ್ತು. ಸರ್ಕಾರ ಕೆಲಸ ಶುರು ಮಾಡಿಯಾಯ್ತು. ಹಲವು ಕ್ಯಾಬಿನೆಟ್ ಸಭೆಗಳಾದವು, ಹಲವು ತೀರ್ಮಾನಗಳಾದವು. ಮೂರು ಗ್ಯಾರಂಟಿಗಳೂ ಜಾರಿಯಾದವು. ಇಷ್ಟೆಲ್ಲಾ ಆದರೂ ಬಿಜೆಪಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲ. ಪಕ್ಷ ಆಡಳಿತ ಮಾಡಲು ನಾಲಾಯಕ್ ಎಂದು ಈಗಾಗಲೇ ಜನರು ಸರ್ಟಿಫಿಕೇಟ್ ಕೊಟ್ಟಾಗಿದೆ, ಈಗ ವಿರೋಧ ಪಕ್ಷವಾಗಿರಲೂ ಸಹ ನಾಲಾಯಕ್ ಎಂದು ತಿಳಿಯುತ್ತಿದೆ. ಪ್ರಜಾಪ್ರಭುತ್ವದ ಸೌಂದರ್ಯಕ್ಕಾಗಿ ಸಮರ್ಥ ವಿಪಕ್ಷ ನಾಯಕನನ್ನು ಎದುರು ನೋಡುತ್ತಿದ್ದೇವೆ. ನಮ್ಮ ಆಸೆ ಈಡೇರುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ಕುಟುಕಿದೆ.