ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದಿದ್ದ BITCOIN ಹಗರಣದ ತನಿಖೆಗೆ SIT ರಚನೆ

ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿಬಂದಿದ್ದ ಬಿಟ್ ಕಾಯಿನ್ ಹಗರಣದ ಮರುತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ (ವಿಶೇಷ ತನಿಖಾ ತಂಡ)ವನ್ನು ರಚನೆ ಮಾಡಿದೆ.

ಸರ್ಕಾರದ ಈ ಆದೇಶ ಬೆನ್ನಲ್ಲೇ ಈ ಹಿಂದೆ ತನಿಖೆ ನಡೆಸಿದ್ದ ಕೆಲವು ಅಧಿಕಾರಿಗಳಿಗೆ ಭಯ ಶುರುವಾಗಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ‘ಬಿಟ್ ಕಾಯಿನ್’ ಪ್ರಕರಣವು ಸಂಚಲನ ಸೃಷ್ಟಿಸಲಿದೆ. ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.

ಎಸ್ಐಟಿಯಲ್ಲಿ ಯಾರೆಲ್ಲ ಇದ್ದಾರೆ..?

ಸಿಐಡಿ, ಎಡಿಜಿಪಿ ಮನೀಷ್ ಕರ್ಬೀಕರ್
ಡಿಐಜಿ ವಂಶಿಕೃಷ್ಣ
ಡಿಸಿಪಿ ಅನೂಪ್ ಶೆಟ್ಟಿ
ಸಿಐಡಿ ಎಸ್ಪಿ ಶರತ್
ಈ ಹಿಂದೆ ಬೆಂಗಳೂರಿನ ಕಾಟನ್ ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಹಿಂದಿನ ಬೊಮ್ಮಾಯಿ ನೇತೃತ್ವದ ಸರ್ಕಾರ, ಪ್ರಕರಣದ ತನಿಖೆಯನ್ನು ಸಿಸಿಬಿಗೆ ಆದೇಶ ನೀಡಿತ್ತು. ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ಅನೇಕ ಮಂದಿಯ ವಿರುದ್ಧ ಆರೋಪ ಕೇಳಿಬಂದಿತ್ತು. ಹಿಂದಿನ ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿತ್ತು. ಅಲ್ಲದೇ ಅನೇಕ ಅಧಿಕಾರಿಗಳ ವಿರುದ್ಧವೂ ಆರೋಪ ಕೇಳಿಬಂದಿತ್ತು.

ಏನಿದು ಬಿಟ್ ಕಾಯಿನ್ ಹಗರಣ..?

ನವೆಂಬರ್ 2020ರಲ್ಲಿ ಸಿಸಿಬಿ ಪೊಲೀಸರು ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಆತನ ಸಹಚರರನ್ನು ಡ್ರಗ್ ಕೇಸ್ನಲ್ಲಿ ಬಂಧಿಸಿದ್ದರು. ಶ್ರೀಕಿ ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್‌ಗಳನ್ನು ಬಳಸಿಕೊಂಡು ಡ್ರಗ್‌ಗಳನ್ನು ಸಂಗ್ರಹಿಸಿದ್ದಾನೆ. ಜೊತೆಗೆ ಅದನ್ನು ತಮ್ಮ ಹೈ-ಪ್ರೊಫೈಲ್ ಕ್ಲೈಂಟ್‌ಗಳಿಗೆ ಮಾರಾಟ ಮಾಡಿದ್ದ ಎಂದು ಆರೋಪಿಸಲಾಗಿತ್ತು.

ಪ್ರಕರಣದ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಶ್ರೀಕೃಷ್ಣ, ransomware ದಾಳಿ, ಬಿಟ್‌ಕಾಯಿನ್ ವಿನಿಮಯಕ್ಕೆ ಹ್ಯಾಕ್ ಮಾಡುವುದು, ಕ್ರಿಪ್ಟೋಕರೆನ್ಸಿ ಲೂಟಿ, ಮನಿ ಲಾಂಡರಿಂಗ್ ಮತ್ತು ಸೈಬರ್ ವಂಚನೆಗಳಂತಹ ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಆಘಾತಕಾರಿ ಅಂಶ ಬಹಿರಂಗಗೊಂಡಿತ್ತು. ಮಾತ್ರವಲ್ಲ, 2019 ರಲ್ಲಿ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನ ಹ್ಯಾಕಿಂಗ್‌ನಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಇದೆ. ಜುಲೈ 2019 ರಲ್ಲಿ ಹಣಕಾಸು ಸಲಹೆಗಾರ ಎಸ್.ಕೆ. ಶೈಲಜಾ. ಅರ್ನೆಸ್ಟ್ ಮನಿ ಡೆಪಾಸಿಟ್ಸ್ ಮರುಪಾವತಿಯನ್ನು ಪರಿಶೀಲಿಸುವಾಗ, 7.37 ಕೋಟಿ ಅನಧಿಕೃತ ನಿಧಿ ವರ್ಗಾವಣೆ ಆಗಿರೋದು ಪತ್ತೆ ಆಗಿತ್ತು. ಈ ಸಂಬಂಧ ಸಿಐಡಿಗೆ ದೂರು ಸಲ್ಲಿಸಲಾಗಿತ್ತು.

Scroll to Top