ಕೋಟ : ಭಾರೀ ಮಳೆಯಿಂದಾಗಿ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಸವಾರ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ವೇಳೆ ನಡೆದಿದೆ
ಮೃತರನ್ನು ಸ್ಥಳಿಯ ನಿವಾಸಿ ದಿವಾಕರ್ ಶೆಟ್ಟಿ( 65) ಎಂದು ಗುರುತಿಸಲಾಗಿದೆ.
ಸ್ಕೂಟರಿನಲ್ಲಿ ರಾತ್ರಿ ಮನೆಗೆ ಬರುತ್ತಿದ್ದಾಗ ಮನೆ ಸಮೀಪದ ರಸ್ತೆಯ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ನಿಯಂತ್ರಣ ತಪ್ಪಿ, ರಸ್ತೆ ಬದಿ ಯಾವುದೇ ತಡೆಗೋಡೆ ಇಲ್ಲದ ಸುಮಾರು 15- 20 ಅಡಿ ಆಳದ ಕೆರೆಗೆ ಸ್ಕೂಟರ್ ಸಮೇತ ಬಿದ್ದರೆನ್ನಲಾಗಿದೆ. ಕೂಡಲೇ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಅಗ್ನಿಶಾಮಕ ದಳ ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಕೆರೆಗೆ ಧುಮುಕಿ ಮೊದಲು ಸ್ಕೂಟರ್ ಅನ್ನು ಮೇಲಕ್ಕೆ ಎತ್ತಿದರು. ನಂತರ ಹುಡುಕಾಟ ನಡೆಸಿ ಇಂದು ನಸುಕಿನ ವೇಳೆ 1:30ರ ಸುಮಾರಿಗೆ ಮೃತದೇಹವನ್ನು ಮೇಲಕ್ಕೆ ತಂದರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.