ಬೆಂಗಳೂರು, ಜು.5: ರಾಜ್ಯ ಸರ್ಕಾರದಿಂದ ಮತ್ತೊಮ್ಮೆ ಟ್ರಾಫಿಕ್ ಫೈನ್ ಡಿಸ್ಕೌಂಟ್ ಅವಧಿಯನ್ನ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇ-ಚಲನ್‌ನಲ್ಲಿ ದಾಖಲಾಗಿರೊ ಟ್ರಾಫಿಕ್ ಫೈನ್‌ಗೆ ಮತ್ತೆ 50% ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಸೆ.9 ರವರೆಗೆ ರಿಯಾಯಿತಿ ಅವಧಿ ಇರಲಿದೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಘೋಷಿಸಿದ್ದ 50% ರಿಯಾಯಿತಿ ಸೌಲಭ್ಯದ ಅವಕಾಶವನ್ನು ಸರ್ಕಾರ ವಾಹನ ಸವಾರರಿಗೆ ಮತ್ತೆ ಕಲ್ಪಿಸಿದೆ. ಈ ಹಿಂದೆ ಎರಡು ಬಾರಿ ಟ್ರಾಫಿಕ್ ಫೈನ್ ಡಿಸ್ಕೌಂಟ್ ನೀಡಿದ್ದ ಸರ್ಕಾರಕ್ಕೆ ಬಾಕಿ ಉಳಿದಿದ್ದ ನೂರಾರು ಕೋಟಿ ಫೈನ್ ಬೊಕ್ಕಸ ಸೇರಿತ್ತು.
ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು, ರಸ್ತೆ ಸುರಕ್ಷತಾ ಕಮಿಷನರ್ ಜೊತೆ ಸಭೆ ನಡೆಸಿ ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಮತ್ತೊಮ್ಮೆ ಸಮಯ ವಿಸ್ತರಿಸುವಂತೆ ಹೇಳಿದ್ದರು. ಕೆಎಸ್‌ಎಲ್‌ಟಿಎ ಆದೇಶದ ಮೇರೆಗೆ ಸರ್ಕಾರ ಮತ್ತೆ ಡಿಸ್ಕೌಂಟ್ ಅವಧಿ ವಿಸ್ತರಣೆ ಮಾಡಿದೆ. ದಂಡ ಬಾಕಿ ಉಳಿಸಿಕೊಂಡಿರುವ ಸವಾರರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದೆ.
ಕಾನೂನು ಸೇವೆಗಳ ಪ್ರಾಧಿಕಾರದ ಪ್ರಸ್ತಾವಕ್ಕೆ ಒಪ್ಪಿದ್ದ ರಾಜ್ಯ ಸರ್ಕಾರ, ರಿಯಾಯಿತಿ ಘೋಷಣೆ ಮಾಡಿತ್ತು. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಿಯಾಯಿತಿ ಸೌಲಭ್ಯದಿಂದಾಗಿ ದಂಡ ಪಾವತಿಸುವವರ ಸಂಖ್ಯೆ ಏರಿಕೆ ಆಗಿತ್ತು. ನೂರಾರು ಕೋಟಿ ಬೊಕ್ಕಸ ಸೇರಿತ್ತು. ಹೀಗಾಗಿ ಮತ್ತೆ ರಿಯಾಯಿತಿ ಸೌಲಭ್ಯವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ.