ಶಿರ್ವ: ಕುತ್ಯಾರು, ಶಿರ್ವ, ಪಿಲಾರು ಗ್ರಾಮಗಳ ಜನರ ದೈನಂದಿನ ಚಟುವಟಿಕೆಗಳ ಕೊಂಡಿಯಾಗಿ, ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಶಿರ್ವ ಸೊರ್ಕಳ ಸಂಪರ್ಕ ಸೇತುವೆಯು ಅಪಾಯಕಾರಿ ಸ್ಥಿತಿಯಲ್ಲಿದ್ದು, ಕುಸಿಯುವ ಹಂತದಲ್ಲಿದೆ.
ಕುತ್ಯಾರು, ಶಿರ್ವ ಹಾಗೂ ಪಿಲಾರು ಗ್ರಾಮ ವ್ಯಾಪ್ತಿಯ ನಾಗರಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ 3 ಗ್ರಾಮಗಳ ಕೃಷಿಕರಿಗೆ ಈ ಸಂಪರ್ಕ ಸೇತುವೆ ಉಪಯೋಗಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ಕುಸಿದು ಬೀಳಲಿರುವ ಶಿಥಿಲಗೊಂಡ ಸೇತುವೆಯ ದುರಸ್ತಿ ಕಾರ್ಯ ನಡೆಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಪಾಯದ ಕರೆಗಂಟೆ
ಸೇತುವೆ ತಳಪಾಯದ ಕಲ್ಲು ಮತ್ತು ತಡೆಗೋಡೆ ಬಿರುಕು ಬಿಟ್ಟಿದೆ. ಸೇತುವೆಯ ಒಂದು ಭಾಗದ ತಡೆಗೋಡೆ ಕಬ್ಬಿಣದ ರಾಡ್ ಸಂಪೂರ್ಣ ಕಿತ್ತುಹೋಗಿದೆ. ಮಳೆ ಗಾಲದಲ್ಲಿ ಸೊರ್ಕಳ ಕೆರೆಯ ನೀರು ರಭಸದಿಂದ ಹರಿಯುತ್ತಿದ್ದು, ತಡೆಗೋಡೆಯೂ ಮುರಿದಿರುವುದರಿಂದ ಮಳೆಗಾಲದಲ್ಲಿ ಸಂಚರಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಅಪಾಯದ ಕರೆಗಂಟೆ ಯಾಗಿದೆ. ಅಪಾಯಕಾರಿ ಸೇತುವೆ ತಳ ಪಾಯದ ಕಲ್ಲು ಬಿರುಕು ಬಿಟ್ಟಿರುವು ದರಿಂದ ಶಾಲಾ ವಾಹನಗಳು, ಘನ ವಾಹನಗಳು ಚಲಿಸುವಾಗ ಮತ್ತಷ್ಟು ಬಿರುಕು ಬಿಟ್ಟು ಕುಸಿದು ಬೀಳುವ ಸಾಧ್ಯತೆ ಇದೆ.
ಈ ಸೇತುವೆ ಅವಲಂಬಿಸಿರುವ ಜನತೆಯಲ್ಲಿ ಹೆಚ್ಚಿನವರು ಕೃಷಿ ಕುಟುಂಬದವರು. ಪಾದೆಹಿತ್ಲು, ಖಾದ್ರಿಹಿತ್ಲು, ಪಿಲಾರು, ಕುತ್ಯಾರು ಭಾಗದಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಯ ಸಾರ್ವಜನಿಕರು ಈ ಸೇತುವೆ ಮೂಲಕ ಓಡಾಡಬೇಕಿದೆ. ಈ ಭಾಗದಲ್ಲಿ 250 ಎಕರೆಗೂ ಹೆಚ್ಚು ಕೃಷಿ ಭೂಮಿ ಇದ್ದು, ಕೃಷಿ ಉತ್ಪನ್ನಗಳ ಸಾಗಾಟಕ್ಕೆ, ಕೃಷಿಪರಿಕರ, ಯಂತ್ರಗಳು, ಗೊಬ್ಬರಗಳ ಸಾಗಾಟಕ್ಕೆ ಜನರು ಈ ಸಂಪರ್ಕ ಸೇತುವೆಯನ್ನು ಅವಲಂಬಿಸಿದ್ದಾರೆ. ಸೇತುವೆ ಸಂಪರ್ಕ ಕಡಿತಗೊಂಡಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಗಳಿಗೆ ಮತ್ತು ಶಿರ್ವ ಪೇಟೆಗೆ ತೆರಳಲು 5-6 ಕಿ.ಮೀ. ಸುತ್ತು ಬಳಸಿ ದೂರದ ಪಿಲಾರು ಜಾಲಮೇಲ ಕುತ್ಯಾರು ಮಾಗಂದಡಿಗಾಗಿ ಬರುವ ಮಾರ್ಗ ಅವಲಂಬಿಸಬೇಕಾಗಿದೆ.