ಶಿರ್ವ ರಸ್ತೆ ಸರಿಪಡಿಸಲು ಆಗ್ರಹ: ಶೀಘ್ರ ಸರಿಪಡಿಸಲು ಮೆಲ್ವಿನ್ ಡಿಸೋಜ ಮನವಿ

ಶಿರ್ವ:ಹೊಂಡ ಗುಂಡಿಗಳಿಂದ ತುಂಬಿರುವ ಕಟಪಾಡಿ ಶಿರ್ವ ಮುಖ್ಯ ರಸ್ತೆಯ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಗಮನಹರಿಸಿ ರಸ್ತೆ ಡಾಮರೀಕರಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಶಿರ್ವ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಶಿರ್ವ ಕಟಪಾಡಿ ರಸ್ತೆಯಲ್ಲಿದ್ದ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಯಿತು. ಬಂಟಕಲ್ ಎಂಜಿನಿಯರಿಂಗ್ ಕಾಲೇಜಿನಿಂದ ಶಿರ್ವ ಗುರುಂಜವರೆಗೆ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಗುಂಡಿಗಳನ್ನು ಮುಚ್ಚುವ ಕೆಲಸ ನಡೆಯಿತು.

ಇದೇ ಸಂದರ್ಭದಲ್ಲಿ ಮೆಲ್ವಿನ್ ಡಿಸೋಜ ಕಳಪೆ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು.

ಸದ್ಯದ ಮಟ್ಟಿಗೆ ಸಂಚಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಈ ಕೆಲಸವನ್ನು ಸರಳವಾಗಿ ಮಾಡಲಾಗಿದೆ. ಪಿಡಬ್ಲ್ಯೂಡಿ ಹಾಗೂ ಸಂಬಂಧಪಟ್ಟವರು ಆದಷ್ಟು ಬೇಗ ಇದನ್ನು ಸರಿಪಡಿಸಲು ಮುಂದಾಗಬೇಕು, ಡಾಮರೀಕರಣ ಕೆಲಸ ಆರಂಭಿಸಬೇಕು, ಈ ಸಮಸ್ಯೆಯ ಬಗ್ಗೆ ಶಾಸಕರೂ ಕೂಡ ಎಚ್ಚೆತ್ತುಕೊಳ್ಳಬೇಕು ಎಂದರು.

ವಿನಯ್ ಕುಮಾರ್ ಸೊರಕೆ ಶಾಸಕರಾಗಿದ್ದ ಸಮಯದಲ್ಲಿ ಇದರ ಕಾಮಗಾರಿ ನಡೆದಿದ್ದು,ಬಳಿಕ ಯಾವ ಕಾರ್ಯವೂ ನಡೆದಿಲ್ಲ. ಶಾಸಕರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದರಿಂದಾಗಿ ಸರ್ಕಾರಕ್ಕೂ ಬೈಯುವಂತಾಗಿದೆ ಎಂದು ಟೀಕಿಸಿದರು. ಆದಷ್ಟು ಶೀಘ್ರವೇ ಕಾಮಗಾರಿ ಆರಂಭಿಸಿ ಸಾರ್ವಜನಿಕರ ಮನವಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಂಚಾಯತ್ ಅಧ್ಯಕ್ಷ ರತನ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಡಿಸೋಜ, ಉಪಾಧ್ಯಕ್ಷೆ ಗ್ರೇಸಿ ಕರ್ಡೋಜ, ಮಾಜಿ ಅಧ್ಯಕ್ಷರಾದ ಹಸನಬ್ಬ ಶೇಖ್, ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಬಂಟಕಲ್, ಜೆಸಿಂತಾ ಡಿಸೋಜ, ಲ್ಯಾನ್ಸಿ ಕೋರ್ಡ, ಆಲ್ವಿನ್ ಬಂಟಕಲ್, ದಿನೇಶ್ ಬಂಟಕಲ್ ಉಪಸ್ಥಿತರಿದ್ದರು.

Scroll to Top