ಉಡುಪಿ: ಉತ್ತರ ಭಾರತ ಬಾರಿ ಪ್ರವಾಹದಿಂದ ಕಂಗಾಲಾಗಿದ್ದು, ಇದರಿಂದ ಪುಣ್ಯಕ್ಷೇತ್ರಗಳಿಗೆ ತೆರಳಿದ ಭಕ್ತರ ಬಗ್ಗೆ ಕುಟುಂಬದವರಿಗೆ ಆತಂಕ ಮೂಡಿದೆ.
ಕೇದಾರನಾಥದಲ್ಲಿ ಗುಡ್ಡದಿಂದ ಬೃಹತ್ ಬಂಡೆಕಲ್ಲು ಉರುಳಿ ಬಿದ್ದು ಸ್ವಲ್ಪದರಲ್ಲೇ ಪಾರಾದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಯಾತ್ರಾರ್ಥಿಗಳ ಜೊತೆಗೆ ಉಡುಪಿಯ ಒಬ್ಬ ಪ್ರವಾಸಿಗರು ಕೂಡ ಬಚಾವಾಗಿದ್ದಾರೆ.
ಕೇದಾರನಾಥ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಕಣಿವೆಯಲ್ಲಿನ ಗುಡ್ಡದಿಂದ ಬೃಹತ್ ಬಂಡೆಕಲ್ಲು ಕುಸಿದು ವಾಹನಗಳ ಮೇಲೆ ಬಿತ್ತು.
ಪರಿಣಾಮ ಐವರು ಯಾತ್ರಾರ್ಥಿಗಳು ಮೃತಪಟ್ಟು ಕೆಲವರು ಗಾಯಗೊಂಡಿದ್ದರು.
ಆ ಘಟನೆ ಮಂಗಳವಾರ ಸಂಭವಿಸಿದ್ದು, ಈ ವೇಳೆ ಉಪ್ಪಿನಂಗಡಿಯ ಯಾತ್ರಾರ್ಥಿಗಳ ತಂಡ ಸ್ವಲ್ಪವೇ ಅಂತರದಿಂದ ಪಾರಾಗಿದ್ದಾರೆ.
ಉಪ್ಪಿನಂಗಡಿಯ ಕೃಷ್ಣ ಶೆಣೈ ನೇತೃತ್ವದ ತಂಡ ಸೋಮವಾರ ಕೇದಾರನಾಥನ ದರ್ಶನ ಪಡೆದು ಹಿಂದಿರುಗುವ ವೇಳೆ ಈ ಘಟನೆ ಸಂಭವಿಸಿದೆ.
ಸೋಮವಾರ ದಿನವಿಡೀ ಶಾಂತವಾಗಿದ್ದ ವಾತಾವರಣ ಮಧ್ಯರಾತ್ರಿ ಕಳೆಯುತ್ತಿ ದ್ದಂತೆಯೇ ಭಾರೀ ಮಳೆ ಸುರಿದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.
ದಾರಿಯುದ್ದಕ್ಕೂ ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು ಸಂಭವಿಸಿದ್ದು, ಕೇದಾರನಾಥದಿಂದ 40 ಕಿ.ಮೀ. ದೂರದಲ್ಲಿನ ಹೆಲಿಪ್ಯಾಡ್ ಹೊಂದಿರುವ ಸ್ಥಳದ ಬಳಿ ಈ ದುರ್ಘಟನೆ ಸಂಭವಿಸಿದೆ.
ತಮ್ಮ ಕಣ್ಣ ಮುಂದೆಯೇ ಈ ದುರ್ಘಟನೆ ಸಂಭವಿಸಿದ್ದು, ದೇವರ ದಯೆಯಿಂದ ನಮ್ಮ ತಂಡ ಸುರಕ್ಷಿತವಾಗಿದೆ ಎಂದು ಅವರು ತಿಳಿಸಿದ್ದಾರೆ.