ಬೆಂಗಳೂರು : ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಕರಾವಳಿಯ ಶಾಸಕರು ಒಗ್ಗಟ್ಟಾಗಿ ಆಗ್ರಹಿಸಿದ್ದು, ಇದಕ್ಕೆ ಸ್ವೀಕರ್ ಯು.ಟಿ. ಖಾದರ್ ಕೂಡ ಧ್ವನಿಗೂಡಿಸಿದ್ದಾರೆ.
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ನ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, 1994ರಲ್ಲಿ ಡಾ. ಎಂ. ವೀರಪ್ಪ ಮೊಲಿ ಅವರು ಸಿಎಂ ಆಗಿದ್ದಾಗ ತುಳು ಅಕಾಡೆಮಿ ಸ್ಥಾಪಿಸಿದ್ದು, ಕೇರಳದಲ್ಲಿ ಕೂಡ ತುಳು ಭಾಷಾ ಅಕಾಡೆಮಿ ಇದೆ. ಅಮೆರಿಕ ವಿಶ್ವವಿದ್ಯಾಲಯದಲ್ಲಿ ತುಳು ಭಾಷೆಯಲ್ಲಿ ಅರ್ಜಿ ನಮೂನೆ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಇದಕ್ಕೆ ಬೆಂಬಲ ಸೂಚಿಸಿರುವ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ನಮ್ಮ ಸರಕಾರ ಇದ್ದಾಗ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಎಲ್ಲ ಪ್ರಕ್ರಿಯೆಗಳನ್ನೂ ಪೂರೈಸಿತ್ತು. ಈಗಿನ ಸರಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡರೆ ಇದು ಸಾಧ್ಯವಾಗಲಿದೆ ಎಂದು ಗಮನ ಸೆಳೆದರು.
ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆ ಮಾಡಲು ಆರ್ಥಿಕ ಹೊಣೆಗಾರಿಕೆಯೂ ಬರುವುದಿಲ್ಲ ಎನ್ನುತ್ತಾ ಅಶೋಕ್ ರೈ ಅವರು ತುಳುವಿನಲ್ಲೇ ಮಾತು ಪ್ರಾರಂಭಿಸಿದ್ದು, ಮಧ್ಯಪ್ರವೇಶಿಸಿದ ವೇದವ್ಯಾಸ ಕಾಮತ್ ಸಹ ತುಳು ಭಾಷೆಯಲ್ಲೇ ಮಾತನಾಡಿದರು.
ಇದಕ್ಕೆ ತುಳುವಿನಲ್ಲೇ ಉತ್ತರಿಸಿದ ಸ್ಪೀಕರ್ ಖಾದರ್, ನೀವು ಹೇಳಬೇಕಾದ್ದನ್ನು ಹೇಳಿದ್ದೀರಿ. ಎಲ್ಲವನ್ನೂ ಕೇಳಿಯಾಗಿದೆ. ಸರಕಾರ ಉತ್ತರ ಕೊಡುತ್ತದೆ ಎಂದಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ಉತ್ತರಿಸಿ, ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಂಬಂಧ ಅಧ್ಯಯನ ನಡೆಸಲು ಡಾ| ಮೋಹನ ಆಳ್ವ ಅಧ್ಯಕ್ಷತೆಯಲ್ಲಿ 2023 ರ ಜ. 12ರಂದು ಸಮಿತಿ ರಚಿಸಲಾಗಿದ್ದು, ಸಮಿತಿಯ ವರದಿ ಬಂದಿದೆ. ಸಂಬಂಧಪಟ್ಟ ಇಲಾಖೆಗಳ ಅಭಿಪ್ರಾಯ ಪಡೆದು ಮುಂದುವರಿಯಬಹುದು ಎಂದು ಶಿಫಾರಸು ಮಾಡಿದೆ. ಸರಕಾರ ಕೂಡ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿಯೇ ಇದೆ. ವಿವಿಧ ಇಲಾಖೆಗಳ ಅಭಿಪ್ರಾಯ ಪಡೆದು ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.