ಮಳೆಯಲ್ಲೇ ಗದ್ದೆ ಉಳುಮೆ ಮಾಡಿದ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ

ಉಡುಪಿ: ಜಿಲ್ಲೆಯಾದ್ಯಂತ ಮತ್ತೊಮ್ಮೆ ಮಳೆಯು ಚುರುಕುಗೊಂಡಿದ್ದು, ಭಾರಿ ಮಳೆ ಆಗುತ್ತಿದೆ. ಇದೆ ವೇಳೆ ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ ಅವರು ಗದ್ದೆ ಉಳುಮೆ ಮಾಡಿ ಗಮನ ಸೆಳೆದಿದ್ದಾರೆ.

ಚಿಕ್ಕ ಹಿಡುವಳಿ, ಕೂಲಿಕಾರರ ಸಮಸ್ಯೆ ಹಾಗೂ ಲಾಭದಾಯಕವಲ್ಲದ ಕಾರಣದಿಂದಾಗಿ ಜನರು ಕೃಷಿಯಿಂದ ವಿಮುಖರಾಗಿ ಸಾವಿರಾರು ಎಕರೆ ಭತ್ತದ ಗದ್ದೆಗಳನ್ನ ಹಡಿಲು ಬಿಟ್ಟಿರುವುದನ್ನು ಗಮನದಲ್ಲಿರಿಸಿ ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಅವರು ಗ್ರಾಮ ಪಂಚಾಯತ್ ವಾರು ಗುರಿಯನ್ನು ನಿಗದಿಗೊಳಿಸಿ , ಅಧೀನ ಸಿಬ್ಬಂದಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಮೂಲಕ ಈಗಾಗಲೇ 1034 ಎಕ್ರೆ ಭೂಮಿಯನ್ನು ಜಿಲ್ಲೆಯಲ್ಲಿ ಗುರುತಿಸಿ ಸಂಜೀವಿನಿ ಸದಸ್ಯರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕುಂದಾಪುರ ತಾಲೂಕಿನ ಅಂಪಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡಾಳಿಯಲ್ಲಿ 12 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಖುದ್ದಾಗಿ ಭಾಗವಹಿಸಿದ್ದರು. ಕುಂದ ನಾಡು ರೈತ ಉತ್ಪಾದಕ ಸಂಸ್ಥೆ ಹಾಗೂ ಅಂಪಾರು ರೋಟರಿ ಕ್ಲಬ್ ರವರ ಸಹಯೋಗದಲ್ಲಿ ವನಶ್ರೀ ಸಂಜೀವಿನಿ ಒಕ್ಕೂಟದ ನೂರಾರು ಸದಸ್ಯರು ಭತ್ತದ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಆನಂತರ ಮಳೆಯ ನಡುವೆಯೇ ಗದ್ದೆಗೆ ಇಳಿದ ಸಿಇಒ ಪ್ರಸನ್ನ ಅವರು ಮಳೆಯ‌ನ್ನು ಲೆಕ್ಕಿಸದೇ ಗದ್ದೆಯಲ್ಲಿ ಕೋಣಗಳ ಮೂಲಕ ಉಳುಮೆ ಮಾಡುವುದರ ಮೂಲಕ ಹಾಗೂ ಭತ್ತದ ನೇಜಿಯನ್ನು ನೆಡುವುದರ ಮೂಲಕ ಹಡಿಲು ಭೂಮಿ ಕೃಷಿಯ ಮಾದರಿ ಕಾರ್ಯಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾ ರೂಪ, ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಕಾರ್ಯದರ್ಶಿ ಉಮೇಶ್ ಶಾನ್ಕಟ್, ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೋಷನಿ ಶೆಟ್ಟಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯತ್ ನ ಸದಸ್ಯರು, ಸಂಜೀವಿನಿ ಸದಸ್ಯರು, ರೈತ ಉತ್ಪಾದಕ ಸಂಸ್ಥೆಯ ಸದಸ್ಯರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದು, ನೇಜಿಯನ್ನು ನೆಟ್ಟರು. ಕಾರ್ಯಕ್ರಮವನ್ನು ಗ್ರಾಮೀಣ ಸೊಗಡಿನ ಸಾಂಪ್ರದಾಯಿಕ ಶೈಲಿಯಲ್ಲಿ ವಿಶಿಷ್ಟವಾಗಿ ಆಯೋಜಿಸಲಾಗಿತ್ತು.

Scroll to Top