ಉಡುಪಿ : 14 ದಿನಗಳ ಹಿಂದೆ ಮಣಿಪಾಲ ಪರಿಸರದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅವರಿಂದ ರಕ್ಷಿಸಲ್ಪಟ್ಟ ಮಾನಸಿಕ ಅಸ್ವಸ್ಥೆ ಕೇರಳ ಮೂಲದ ಆಯೇಷಾ ಬಾನು (30) ಎಂಬಾಕೆಯನ್ನು ಸ್ವೀಕರಿಸಲು ಆಕೆಯ ಕುಟುಂಬ ಸ್ಪಂದನೆ ನೀಡುತ್ತಿಲ್ಲ. ಆದ್ದರಿಂದ ಯುವತಿಯ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.
ಯುವತಿ ಆಯೇಷಾ ಬಾನು ಕೇರಳದಿಂದ ಮಣಿಪಾಲಕ್ಕೆ ಬಂದಿದ್ದು, ಮಾನಸಿಕ ಅಸ್ವಸ್ಥಳಾಗಿ ಸಾರ್ವಜನಿಕ ಸ್ಥಳದಲ್ಲಿ ಅತಿರೇಕ ವರ್ತನೆ ತೋರಿದ್ದಳು. ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಮಣಿಪಾಲ ಪೊಲೀಸರ ಸಹಾಯದಿಂದ ಈಕೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಸಂದರ್ಭದಲ್ಲಿ ಯುವತಿಯ ಸಹೋದರನನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ತಾನು ಎರಡು ದಿನಗಳಲ್ಲಿ ಬರುವೆ ಎಂದಿದ್ದ ಆತ ಇದೀಗ 14 ದಿನಗಳು ಕಳೆದರೂ ಬಂದಿಲ್ಲ. ಪೋನ್ ಕರೆಗೆ ಸ್ಪಂದಿಸುತ್ತಿಲ್ಲ. ಯುವತಿಗೆ ಮುಂದಿನ ಆಶ್ರಯ ನೀಡುವುದು ದೊಡ್ಡ ಸವಾಲಾಗಿದ್ದು, ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಜರುಗಿಸಿ ಯುವತಿಗೆ ನ್ಯಾಯ ಒದಗಿಸುವಂತೆ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.