ಮಂಗಳೂರು:ಕಿಟಕಿ ಮುರಿದು ಹಾಸ್ಟೆಲ್ ನಿಂದ ರಾತ್ರೋರಾತ್ರಿ ಪರಾರಿಯಾದ ವಿದ್ಯಾರ್ಥಿನಿಯರು!

ಮಂಗಳೂರು ಸೆಪ್ಟೆಂಬರ್ 21: ನಗರದ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನ ಹಾಸ್ಟೆಲ್ ನಿಂದ ಮೂವರು ವಿದ್ಯಾರ್ಥಿನಿಯರು ಕಿಟಕಿ ಮುರಿದು ಪರಾರಿಯಾಗಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಯಶಸ್ವಿನಿ, ದಕ್ಷತಾ, ಸಿಂಚನಾ ಎಂಬ ಮೂವರು ಪರಾರಿಯಾದ ವಿದ್ಯಾರ್ಥಿನಿಯರು.

ಯಶಸ್ವಿನಿ ಹಾಗೂ ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದರೆ. ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದಾರೆ‌. ನಸುಕಿನ ವೇಳೆ 3 ಗಂಟೆಗೆ ಪರಾರಿಯಾಗಿದ್ದಾರೆ. ಇವರು ಮೂವರೂ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ.

‘ನಾವು ಹೋಗುತ್ತಿದ್ದೇವೆ, ಕ್ಷಮಿಸಿ’ ಎಂದು ಪತ್ರ ಬರೆದಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ವಿದ್ಯಾರ್ಥಿನಿಯರು ಹೋಗಿರುವುದೆಲ್ಲಿಗೆ?, ಯಾಕಾಗಿ ಹೋಗಿರುವುದು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕಾಲೇಜಿಗೆ ಪೊಲೀಸರು ಬಂದು ತನಿಖೆ ನಡೆಸುತ್ತಿದ್ದಾರೆ.

ಕಿಟಕಿಯ ರಾಡ್ ಗಳನ್ನು ಬಗ್ಗಿಸಿದ ಕಿಟಕಿ ಮೂಲಕ ಹೊರಹೋಗಿ ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರು ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿಯರು ಬ್ಯಾಗ್ ಸಮೇತ ಹಾಸ್ಟೆಲ್ ನಿಂದ ಹೊರಬಂದು ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುವ ದೃಶ್ಯ ಹಾಸ್ಟೆಲ್ ನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ವಿದ್ಯಾರ್ಥಿನಿಯರು ಪರಾರಿಯಾಗಿರುವ ಬಗ್ಗೆ ಸುದ್ದಿ ಮಾಡಲು ಕಾಲೇಜು ಆವರಣದ ಬಳಿ ಹೋದ ಸುದ್ದಿವಾಹಿನಿಗಳ ಕ್ಯಾಮೆರಾವನ್ನು ಕಿತ್ತುಕೊಳ್ಳುವ ಪ್ರಯತ್ನವೂ ನಡೆದಿದೆ. ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿಯೋರ್ವ ಕ್ಯಾಮೆರಾವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು, ಕ್ಯಾಮೆರಾಗೆ ಹಾನಿಯಾಗಿದೆ. ಟ್ರಸ್ಟಿಯ ದರ್ಪಕ್ಕೆ ಪತ್ರಕರ್ತರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಎಸಿಪಿ ದಿನಕರ್ ಶೆಟ್ಟಿ ಆಗಮಿಸಿದ ಪರಿಶೀಲನೆ ಮಾಡಿದ್ದಾರೆ. ವಿದ್ಯಾರ್ಥಿನಿ ಯರು ನಾಪತ್ತೆಯಾದ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.

Scroll to Top