ಉಡುಪಿ : ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರದ ಹಿಂದಿನ ರಾಜಕೀಯ ಮತ್ತು ಜನಾಂಗೀಯ ದ್ವೇಷದ ಕಾರಣಕ್ಕೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಯುವತಿಯರಿಗೆ ನ್ಯಾಯ ಒದಗಿಸಲು ಕೋರಿ ಸಾಲಿಡಾರಿಟಿ ಯೂತ್’ಮೂವ್ಮೆಂಟ್, ಉಡುಪಿ ಜಿಲ್ಲೆ, ಎಸ್.ಐ.ಓ ಉಡುಪಿ ಜಿಲ್ಲೆ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಫಾ.ವಿಲಿಯಂ ಮಾರ್ಟಿಸ್, ಮಣಿಪುರದಲ್ಲಿ ಅಲ್ಪಸಂಖ್ಯಾತ ಕುಕಿ ಸಮುದಾಯ ದೌರ್ಜನ್ಯಕ್ಕೊಳಕ್ಕಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರಕಾರ ಮೌನ ವಹಿಸಿದೆ. ಇಂತಹ ಸಮಯದಲ್ಲಿ ಸಂತ್ರಸ್ಥರ ಪರವಾಗಿ ನಾವು ದನಿಯೆತ್ತರಿಸಬೇಕಾಗಿದೆ ಎಂದು ಹೇಳಿದರು.
ಪ್ರೊ.ಫಣಿರಾಜ್ ಮಾತನಾಡಿ, “ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ನಾವು ಯೋಚಿಸಿದಷ್ಟು ಸರಳೀಕೃತವಾಗಿಲ್ಲ. ಇದರ ಹಿಂದೆ ಆರ್.ಎಸ್.ಎಸ್ ಮತ್ತು ಬಿಜೆಪಿಯ ಹಿಂದುತ್ವದ ವಿಭಜನಕಾರಿ ನೀತಿ ಅಡಗಿದೆ. ಈ ನೀತಿ ಇಡೀ ಭಾರತದಾದ್ಯಂತ ಹಬ್ಬುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದೀಗ ಈಶಾನ್ಯ ಭಾರತದಲ್ಲಿ ಬುಡಕಟ್ಟು ಜನರ ಮೇಲೆ ನೀತಿ ಅನುಸರಿಸಿ ವಿಭಜಿಸಿ ಅಳಲು ಪ್ರಯತ್ನಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹಿಂಸಾಚಾರದ ವಿರುದ್ಧ ತುಟಿ ಬಿಚ್ಚದೆ ಪ್ರಧಾನಿ ವಿಭಜನಕಾರಿ ನೀತಿಗೆ ಅನುಮೋದನೆ ನೀಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರದ ಹಿಂಸಾಚಾರದಲ್ಲಿ ವಿಭಜನಕಾರಿ ನೀತಿಯೊಂದಿಗೆ ಬಂಡವಾಳಶಾಹಿಗಳ ಷಡ್ಯಂತ್ರ ಅಡಗಿದೆ. ಕುಕಿ ಸಮುದಾಯ ವಾಸವಿರುವ ಗುಡ್ಡಗಾಡು ಪ್ರದೇಶಗಳನ್ನು ಅಕ್ರಮಿಸಿಕೊಂಡು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರು ಎಣ್ಣೆ ಬೀಜ ಬೆಳೆಸುವ ಹುನ್ನಾರ ಕೂಡ ನಡೆಯುತ್ತಿದೆ. ಈ ಮೂಲಕ ಅದಾನಿಗೆ ಆ ಪ್ರದೇಶ ಮಾರಲು ಹೊರಟಿದೆ. ಈ ಎಲ್ಲ ಕಾರಣ ಮುಂದಿಟ್ಟುಕೊಂಡು ಈ ಎರಡು ಸಮುದಾಯದ ನಡುವೆ ಕಚ್ಚಾಟ ಏರ್ಪಡಿಸಲಾಗುತ್ತಿದೆ ಎಂದರು.
ಹೆಣ್ಣು ಮಕ್ಕಳ ಮೇಲೆ ನಡೆದ ಘನಘೋರಾ ಅತ್ಯಾಚಾರ ಖಂಡಿಸುತ್ತ ಆರ್.ಎಸ್.ಎಸ್, ಬಿಜೆಪಿಯ ಹಿಂದುತ್ವವಾದಿ ರಾಷ್ಟ್ರೀಯವಾದವನ್ನು ಅರ್ಥೈಸುವ ಅಗತ್ಯವಿದೆ. ಆಗ ಮಾತ್ರ ಅಲ್ಲಿನ ರಾಜಕೀಯ ಅರ್ಥ ಮಾಡಿಕೊಳ್ಳಲು ಸಾಧ್ಯ. ಈಗಾಗಲೇ ಆ ರಾಜಕೀಯವನ್ನು ನಮ್ಮ ಕರಾವಳಿಯಲ್ಲಿ, ಅಸ್ಸಾಮ್ ನಲ್ಲಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಬಳಸಿ ಯಶಸ್ವಿಯಾಗಿದೆ. ಅದನ್ನು ಈ ಪ್ರಜಾಪ್ರಭುತ್ವದಲ್ಲಿ ಸೋಲಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಸನೆಟ್ ಬೋರ್ಬೊಝಾ ಅವರು ಮಾತನಾಡಿ, “ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಮಣಿಪುರದಲ್ಲಿ ಯುವತಿಯರ ಮೇಲೆ ನಡೆದ ಕೃತ್ಯ ಅಮಾನವೀಯವಾದದ್ದು ಇಂತಹ ಘಟನೆಯನ್ನು ಖಂಡಿಸದಿದ್ದರೆ ನಾವು ಮನುಷ್ಯರಾಗಲು ಸಾಧ್ಯವಾಗುದಿಲ್ಲ. ಮಹಿಳೆಯರ ಘನತೆಯ ರಕ್ಷಣೆ ಕೇವಲ ಘೋಷಣೆ ಮಾಡಲಾಗುತ್ತದೆ. ಆದರೆ ವಾಸ್ತವಿಕತೆ ಬೇರೆ ಇದೆ. ಮಹಿಳೆಯರ ಘನತೆಯನ್ನು ಗೌರವಿಸುವ ಸಮಾಜ ಹುಟ್ಟು ಹಾಕಬೇಕೆಂದು” ಕರೆ ನೀಡಿದರು.
ನಂತರ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಾಲಿಡಾರಿಟಿ ಯೂತ್’ ಮೂವ್ಮೆಂಟ್ ಜಿಲ್ಲಾಧ್ಯಕ್ಷರಾದ ನಬೀಲ್ ಗುಜ್ಜರ್’ಬೆಟ್ಟು, ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಅಫ್ವಾನ್ ಹೂಡೆ, ಸಾಲಿಡಾರಿಟಿ ಹೂಡೆ ಘಟಕಾಧ್ಯಕ್ಷ ಜಾಬೀರ್ ಖತೀಬ್, ಸಾಲಿಡಾರಿಟಿ ಮಲ್ಪೆ ಕಾರ್ಯದರ್ಶಿ ಶುಐಬ್ ಮಲ್ಪೆ, ಉಡುಪಿಯ ಕಾರ್ಯದರ್ಶಿ ಫೈಸಲ್ ಉಡುಪಿ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಕುಲ್ಸುಮ್ ಅಬುಬಕ್ಕರ್ ಉಪಸ್ಥಿತರಿದ್ದರು.