ಟಾಯ್ಲೆಟ್ ನಲ್ಲಿ ಮೊಬೈಲ್ ಇರಿಸಿ ಚಿತ್ರೀಸಿದ ಪ್ರಕರಣ -ಎಸ್ಪಿ ಮಚ್ಚೀಂದ್ರ ಸ್ಪಷ್ಟೀಕರಣ

ಉಡುಪಿ, ಜು.25: ಉಡುಪಿಯ ಪ್ಯಾರಾಮೆಡಿಕಲ್ ಕಾಲೇಜಿನ ಟಾಯ್ಲೆಟ್ ನಲ್ಲಿ ಮೊಬೈಲ್ ಇರಿಸಿ ಚಿತ್ರೀಕರಣ ಮಾಡಿದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಈ ಬಗ್ಗೆ ಯಾವುದೇ ದೂರು ದಾಖಲಾಗದಿದ್ದರೂ ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳನ್ನು ಹಬ್ಬಿಸಲಾಗುತ್ತಿದೆ.

ಈ ವಿಚಾರವಾಗಿ ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರು ಸ್ಪಷ್ಟೀಕರಣ ನೀಡಿದ್ದಾರೆ.

‘ಕಳೆದ ವಾರ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ವಿಚಾರ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ.

ಈ ವಿಚಾರದ ಜತೆಗೆ ಬೇರೆ ಬೇರೆ ಉದ್ದೇಶದಿಂದ ಮಾಹಿತಿಗಳು ಶೇರ್ ಆಗುತ್ತಿವೆ.

ಆದರೆ ಹಿಡನ್ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡಿದ ವಿಚಾರವನ್ನು ನಮ್ಮ ಗಮನಕ್ಕೆ ಯಾರೂ ತಂದಿಲ್ಲ.

ಬ್ಲ್ಯಾಕ್ ಮೇಲ್ ಮಾಡುವ ಸಾಧ್ಯತೆ ಬಗ್ಗೆ ಮತ್ತು ವೀಡಿಯೋ ಹರಿದಾಡಿದ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ’ ಎಂದು ಉಡುಪಿ ಎಸ್‌ಪಿ ತಿಳಿಸಿದ್ದಾರೆ.

‘ಬೇರೆ ಕಡೆಯ ವಿಡಿಯೋ ಶೇರ್ ಆಗುತ್ತಿದೆ, ವಾಯ್ಸ್ ಎಡಿಟ್ ಮಾಡಲಾಗಿದೆ.

ಸತ್ಯಾಸತ್ಯತೆ ಗೊತ್ತಿಲ್ಲದೆ ಶೇರ್ ಮಾಡಿದರೆ ತಪ್ಪಾಗುತ್ತದೆ.

ವೈರಲ್ ಆಗಿರುವ ಬಗ್ಗೆ ಫೇಸ್ ಬುಕ್, ವಾಟ್ಸಾಪ್ ಮೇಲೆ ನಿಗಾ ಇರಿಸಲಾಗಿದೆ.

ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ಕ್ರಮ ಕೈಗೊಳ್ಳುತ್ತೇವೆ. ಯಾರೂ ಕೂಡಾ ಈ ಬಗ್ಗೆ ವದಂತಿ ಹಬ್ಬಿಸಬಾರದು’ ಎಂದು ಅವರು ಮನವಿ ಮಾಡಿದ್ದಾರೆ.

Scroll to Top