ದೇವರ ಉತ್ಸವ ಮೂರ್ತಿ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ಮೂರ್ತಿ ಮುಟ್ಟಿರುವ ಕಾರಣಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶೊಭಾ ಹಾಗು ರಮೇಶ್ ದಂಪತಿ, ಕಾಲೋನಿಯಲ್ಲಿ ವಾಸ ಮಾಡುತ್ತಿದ್ದರು.
10 ದಿನಗಳ ಹಿಂದೆ ಗ್ರಾಮದ ಭೂತಮ್ಮ ದೇವರ ಮೂರ್ತಿ ಮೆರವಣಿಗೆ ವೇಳೆ, 15 ವರ್ಷದ ಬಾಲಕ ಚೇತನ್ ದೇವರ ಉತ್ಸವ ಮೂರ್ತಿಗಳನ್ನು ಮುಟ್ಟಿದ್ದಾನೆ. ಹೀಗಾಗಿ ಮೂರ್ತಿಗೆ ಮತ್ತೊಮ್ಮೆ ಬಣ್ಣ ಬಳಿಸಬೇಕೆಂದು, ಗ್ರಾಮಸ್ಥರಾದ ನಾರಯಣಸ್ವಾಮಿ ಹೇಳಿದ್ದಾರೆ. ಇಲ್ಲವಾದರೆ 60 ಸಾವಿರ ದಂಡ ಕಟ್ಟಬೇಕು ಅಥವಾ ಊರು ಬಿಟ್ಟು ಹೋಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಇದಿರಿಂದ ನೊಂದ ಕುಟುಂಬ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ಜಿಲ್ಲಾಧಿಕಾರಿ ವೆಂಕಟ್ ರಾಜ ಮತ್ತು ಜಿಲ್ಲಾ ರಕ್ಷಣಾಧಿಕಾರಿ ದೇವರಾಜ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ಎಲ್ಲರೂ ಸಾಮರಸ್ಯದಿಂದ ಜೀವನ ಸಾಗಿಸಬೇಕು. ಯಾವುದೇ ಗಲಾಟೆಗಳಿಗೆ ಅವಕಾಶ ನೀಡಬಾರದೆಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದ್ದಾರೆ.