ಡಿಜೆ ಹಳ್ಳಿ-ಕೆಜಿ ಹಳ್ಳಿ ಸೇರಿದಂತೆ ಇತರೆ ಹಿಂಸಾಚಾರ ಪ್ರಕರಣಗಳನ್ನು ಮರು ಪರಿಶೀಲಿಸಿ ಹಿಂಪಡೆಯುವಂತೆ ಸೂಚಿಸಿದ ಗೃಹ ಸಚಿವ

ಬೆಂಗಳೂರು, ಜು.26: ಕರ್ನಾಟಕದ ವಿವಿಧೆಡೆ ಪ್ರತಿಭಟನೆ ಗಲಭೆ ಪ್ರಕರಣಗಳಲ್ಲಿ ಬಂಧಿತರಾಗಿರುವ ಯುವಕರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕೇಸ್ಗಳನ್ನು ಹಿಂಪಡೆಯುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಗೆ ಪತ್ರ ಬರೆದಿದ್ದಾರೆ. ಸುಳ್ಳು ಮೊಕದ್ದಮೆಗಳಲ್ಲಿ ಯುವಕರು, ವಿದ್ಯಾರ್ಥಿಗಳು ಬಂಧಿತರಾಗಿದ್ದಾರೆ. ಹೀಗಾಗಿ ಪ್ರಕರಣಗಳನ್ನು ಮರು ಪರಿಶೀಲಿಸಿ, ನಿಯಮಾನುಸಾರ ಹಿಂಪಡೆಯುವಂತೆ ಮೈಸೂರಿನ ಎನ್.ಆರ್. ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್, ತನ್ವೀರ್ ಸೇಠ್ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ನಗರದ ಡಿಜೆ ಹಳ್ಳಿ-ಕೆಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಇತರೆ ಕಡೆಗಳಲ್ಲಿ ನಡೆದ ಪ್ರತಿಭಟನೆ ಹಾಗೂ ಗಲಭೆಗಳಲ್ಲಿ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳು ಸುಳ್ಳು ಮೊಕದ್ದಮೆಗಳಲ್ಲಿ ಬಂಧಿತರಾಗಿದ್ದು, ಆ ಮೊಕದ್ದಮೆಗಳನ್ನು ಮರು ಪರಿಶೀಲಿಸಿ, ನಿಯಮನುಸಾರವಾಗಿ ಹಿಂಪಡೆಯಲು ಕ್ರಮಕೈಗೊಳ್ಳುವಂತೆ ಸರ್ಕಾರ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಇನ್ನು ಈ ಬಗ್ಗೆ ಇಂದು (ಜುಲೈ 26) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಸತ್ಯಾಂಶ, ಕಾನೂನಾತ್ಮಕ ಅಂಶಗಳಿದ್ದರೆ ಮಾತ್ರ ಈ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಗಲಭೆ ಆರೋಪಿಗಳ ಕೇಸ್ ವಾಪಸ್ ಬಗ್ಗೆ ಸಚಿವ ಸಂಪುಟ ಉಪಸಮತಿ ವರದಿ ನೀಡುತ್ತೆ. ನಂತರ ಸಚಿವ ಸಂಪುಟದಲ್ಲಿ ತೀರ್ಮಾನವಾಗುತ್ತೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯವರು ಯಾಕೆ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸ ಇಲ್ಲ ಎಂದು ಕಾಣಿಸುತ್ತದೆ. ಹೀಗಾಗಿ ಸಣ್ಣ ಸಣ್ಣ ವಿಷಯಗಳಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬರದ ಬಗ್ಗೆ ಪ್ರವಾಹದ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ ಎಂದು ತಿರುಗೇಟು ನೀಡಿದರು.

Scroll to Top