ಉಡುಪಿ, ಜು.26: ನಗರದ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಯುವತಿಯರ ವೀಡಿಯೋ ಚಿತ್ರೀಕರಿಸಿದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥ ಮೂವರು ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಾಗಿದೆ.
ವೀಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾದ ಶಬನಾಝ್, ಅಲ್ಫೀಯಾ ಮತ್ತು ಅಲೀಮಾ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮಾ ಜಿ.ಬಿ ಅವರು ಸ್ವಯಂ ಪ್ರೇರಿತವಾಗಿ ದಾಖಲಿಸಿದ್ದಾರೆ.
ಈ ಸಂಬಂಧ ಕಾಲೇಜು ನಿರ್ದೇಶಕಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮೂವರು ವಿದ್ಯಾರ್ಥಿನಿಯರು ತಪ್ಪು ಒಪ್ಪಿಕೊಂಡಿದ್ದಾರೆ. ಮೂವರನ್ನು ಕೂಡಲೇ ಸಸ್ಪೆಂಡ್ ಮಾಡಿದ್ದೇವೆ. ಸಂತ್ರಸ್ತೆ ಯುವತಿ ಭವಿಷ್ಯದ ದೃಷ್ಟಿಯಿಂದ ದೂರು ಕೊಡಲು ಒಪ್ಪಿಲ್ಲ ಎಂದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂ ಪ್ರೇರಿತವಾಗಿ ದೂರು ನೀಡಬೇಕು, ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಗ್ರ ತನಿಖೆಗೆ ಆಗ್ರಹ ವ್ಯಕ್ತವಾದ ಬೆನ್ನಲ್ಲೇ, ಇದೀಗ ಮಲ್ಪೆ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಈ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಮೂಲಕ ತನಿಖೆ ನಡೆಸಲಾಗುವುದು. ಈ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು. ಇದು ಅತೀ ಸೂಕ್ಷ್ಮ ವಿಚಾರವಾಗಿದೆ. ಹೆಣ್ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದ್ದಾರೆ.