ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ 11 ಮಹಿಳೆಯರ ತಂಡವು ರಾಜ್ಯ ಸರ್ಕಾರದ ಮಾನ್ಸೂನ್ ಬಂಪರ್ ಲಾಟರಿಯನ್ನು ಗೆದ್ದಿದೆ, ಅದು ಕೂಡ ಬರೋಬ್ಬರಿ 10 ಕೋಟಿ ರೂಪಾಯಿ ಬಹುಮಾನವನ್ನು ಹೊಂದಿದೆ.
ಪರಪ್ಪನಗರಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆಯಲ್ಲಿ ತೊಡಗಿದ್ದ ಹರಿದ ಕರ್ಮ ಸೇನೆ (ಹಸಿರು ಸ್ವಯಂಸೇವಕ ಪಡೆ)ಯ ಕಾರ್ಯಕರ್ತ ಮಹಿಳೆಯರು 250 ರೂ.ಗೆ ಖರೀದಿಸಿದ ಲಾಟರಿ ಟಿಕೆಟ್‌ಗೆ ಪ್ರಥಮ ಬಹುಮಾನ ಜಾಕ್‌ಪಾಟ್ ಹೊಡೆದಿದೆ.
ಕೇರಳ ಲಾಟರಿ ಇಲಾಖೆ ನಡೆಸುವ ಡ್ರಾನಲ್ಲಿ 10 ಕೋಟಿ ರೂ. ಬಹುಮಾನ ಈ ಮಹಿಳೆಯರ ಪಾಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆಯರು ನಾವೆಲ್ಲರೂ ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೆಟ್‍ಗಳನ್ನು ಖರೀದಿಸಿದ್ದೆವು.
ಇದೇ ಮೊದಲ ಬಾರಿಗೆ ನಾವು ಗೆದ್ದಿದ್ದೇವೆ. ಬಹುಮಾನ ಗೆಲ್ಲುತ್ತೇವೆ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂದಿದ್ದಾರೆ.
ನಮ್ಮ ಟಿಕೆಟ್‍ಗೆ ಬಹುಮಾನ ಬಂದಿರುವುದು ತಿಳಿದಾಗ ಖುಷಿಯಾಯಿತು. ನಮಗೆ ವೇತನ ಹೊರತುಪಡಿಸಿ ಯಾವುದೇ ಆದಾಯ ಮೂಲಗಳಿಲ್ಲ.
ನಾವೆಲ್ಲರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ.
ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣ ಸಹಕಾರವಾಗಲಿದೆ ಎಂದು ಮತ್ತೋರ್ವ ಮಹಿಳೆ ತಿಳಿಸಿದ್ದಾರೆ.
ನಗರಸಭೆಯ ಹರಿತ ಕರ್ಮ ಸೇನೆ ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ.
ಎಲ್ಲಾ ವಿಜೇತರು ಶ್ರಮಜೀವಿಗಳಾಗಿದ್ದಾರೆ. ಅವರೆಲ್ಲ ಹೆಚ್ಚಾಗಿ ಸಾಲದಲ್ಲಿದ್ದಾರೆ.
ಅಲ್ಲದೇ ಮದುವೆಗೆ ಬಂದಿರುವ ಹೆಣ್ಣುಮಕ್ಕಳಿದ್ದಾರೆ. ಕೆಲವರು ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಬೇಕಿದೆ.
ಅವರ ಮನೆಗಳು ಭದ್ರವಾಗಿಲ್ಲ. ಅಂಥವರಿಗೆ ಈ ಲಾಟರಿ ಒಲಿದಿರುವುದು ಖುಷಿ ನೀಡಿದೆ ಎಂದಿದ್ದಾರೆ.
ಲಾಟರಿ ವಿಜೇತ ಮಹಿಳೆಯರನ್ನು ಭೇಟಿ ಮಾಡಿ ಹಲವಾರು ಜನ ಅಭಿನಂದಿಸಿದ್ದಾರೆ. ಶ್ರಮಜೀವಿಗಳಿಗೆ ಒಲಿದ ಅದೃಷ್ಟಕ್ಕೆ ಖುಷಿಪಟ್ಟಿದ್ದಾರೆ.