ಕಾರವಾರ : ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ಮತ್ತು ಹಲವೆಡೆ ಗುಡ್ಡ ಕುಸಿತದಂತಹ ಘಟನೆಗಳು ನಡೆದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.
ಜಿಲ್ಲೆಯ ಮಾಗೋಡು, ಸಾತೊಡ್ಡಿ, ಅಪ್ಸರಕೊಂಡ, ಅಣಶಿ, ವಿಭೂತಿ ಫಾಲ್ಸ್ ಸೇರಿದಂತೆ ಬಹುತೇಕ ಜಲಪಾತಗಳ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.
ಜಲಪಾತ ವೀಕ್ಷಣೆಗೆ ಹೋಗುವ ದಾರಿಯಲ್ಲಿ ಕೆಲವು ಕಡೆ ಗುಡ್ಡ ಕುಸಿತ ಹಾಗೂ ಅಪಾಯಕಾರಿ ದಾರಿ ಇರುವ ಕಾರಣ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬಹುತೇಕ ಜಲಪಾತದ ದಾರಿಯಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ.
ವಿಭೂತಿ, ಅಪ್ಸರ ಕೊಂಡ, ಸಾತೊಡ್ಡಿ ಜಲಪಾತ ವೀಕ್ಷಣೆ ಮಳೆಗಾಲದಲ್ಲಿ ಅಪಾಯಕಾರಿ. ಹಿಂದೆ ಮಳೆಗಾಲದಲ್ಲಿ ಜಲಪಾತ ನೋಡಲು ಹೋಗಿ ಪ್ರವಾಸಿಗರು ಸಾವನ್ನಪ್ಪಿದ ಘಟನೆಗಳು ನಡೆದಿವೆ. ಉಡುಪಿಯಲ್ಲಿ ನಡೆದ ಇತ್ತೀಚಿನ ಘಟನೆಯ ನಂತರ ಉತ್ತರ ಕನ್ನಡ ಜಿಲ್ಲಾಡಳಿತ ಬಿಗಿ ಹಾಗೂ ಮುಂಜಾಗ್ರತಾ ಕ್ರಮ ಕೈಗೊಂಡಿದೆ.