ಸುಬ್ರಹ್ಮಣ್ಯ: ಅರ್ಚಕರ ಮನೆಯಿಂದ ನಗದು ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳ್ಳತನ ನಡೆಸಿರುವ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಮೂಲತಃ ಉಡುಪಿ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಸುಬ್ರಹ್ಮಣ್ಯದ ಮಠದಲ್ಲಿ ಪುರೋಹಿತ ರಾಗಿರುವ ಕೃಷ್ಣರಾಜ ಭಟ್ ಅವರ ಸುಬ್ರಹ್ಮಣ್ಯದ ಬಾಡಿಗೆ ಮನೆಯಲ್ಲಿ ಕಳವು ನಡೆದಿದೆ.
ಕೃಷ್ಣರಾಜ ಭಟ್ ಅವರು ಜು. 27ರಂದು ಸಂಜೆ ಮನೆಮಂದಿ ಜತೆ ಉಡುಪಿಗೆ ತೆರಳಿ ಜು. 30ರಂದು ಸಂಜೆ ಸುಬ್ರಹ್ಮಣ್ಯದ ಬಾಡಿಗೆ ಮನೆಗೆ ಹಿಂದಿರುಗಿದ್ದರು. ಮನೆಗೆ ಬಂದ ವೇಳೆ ಎದುರಿನ ಬಾಗಿಲಿಗೆ ಒಳ ಭಾಗದಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಹಿಂಬದಿ ಬಾಗಿಲು ತೆರೆದಿತ್ತು, ಅಲ್ಲಿಂದ ಒಳಗೆ ಹೋದ ವೇಳೆ ಮೂರು ಕಪಾಟುಗಳು ತೆರೆದಿದ್ದು ಬಟ್ಟೆಗಳು, ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಮಾಡಿನ ಹಂಚು ತೆಗೆದಿದ್ದು, ಕಳ್ಳರು ಹಂಚು ತೆಗೆದು ಒಳ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದೆ.
ದೇವರ ಕೋಣೆಯಲ್ಲಿದ್ದ 40 ಸಾವಿರ ಮೌಲ್ಯದ 2 ಬೆಳ್ಳಿಯ ದೀಪ, 20 ಸಾವಿರ ಮೌಲ್ಯದ ಬೆಳ್ಳಿಯ ತಟ್ಟೆ, 40 ಸಾವಿರ ಮೌಲ್ಯದ ಬೆಳ್ಳಿಯ ಕರಡಿಗೆ, 70 ಸಾವಿರ ಮೌಲ್ಯದ ಮಗುವಿನ ಚಿನ್ನದ ಸರ, 10 ಸಾವಿರ ಮೌಲ್ಯದ ಕಿವಿಯೋಲೆ ಒಂದು ಜತೆ, 1 ಲಕ್ಷ ರೂ. ಸೇರಿದಂತೆ ಒಟ್ಟು 2.80 ಲಕ್ಷ ಮೌಲ್ಯದ ನಗದು, ಸೊತ್ತು ಕಳವಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.