ಕರಾವಳಿಗೆ ಇಂದು ಸಿಎಂ: ಅಧಿಕಾರಕ್ಕೇರಿದ ಬಳಿಕ ಮೊದಲ ಬಾರಿ ದ.ಕ., ಉಡುಪಿಗೆ

ಮಣಿಪಾಲ: ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಕಾಂಗ್ರೆಸ್‌ ಸರಕಾರದ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲನೇ ಬಾರಿಗೆ ಸಿದ್ದರಾಮಯ್ಯ ಅವರು ಆ. 1ರಂದು ಕರಾವಳಿ ಜಿಲ್ಲೆಗಳ ಪ್ರವಾಸ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿ ಉಭಯ ಜಿಲ್ಲೆಗಳ ಪ್ರಗತಿ ಪರಿಶೀಲನೆ ಕೈಗೊಳ್ಳಲಿದ್ದಾರೆ.

ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಅಧಿಕೃತವಾಗಿ ಆ.1ರಂದೇ ಜಾರಿಗೆ ಬರು ತ್ತಿರುವುದು ಈ ಪ್ರವಾಸಕ್ಕೆ ಹೆಚ್ಚಿನ ಮಹತ್ವವನ್ನು ಒದಗಿಸಿಕೊಟ್ಟಿದೆ.

ಭಾರೀ ಮಳೆ, ಪ್ರವಾಹದಿಂದ ತತ್ತರಿಸಿದ್ದ ಕರಾವಳಿ ಜಿಲ್ಲೆಗಳಿಗೆ ಸಿಎಂ ಆಗಮಿಸಿ ಪ್ರಗತಿ ಪರಿಶೀಲನೆ ನಡೆಸುವುದರ ಜತೆಗೆ ನೆರೆ ಹಾನಿ, ಕಷ್ಟ ನಷ್ಟಗಳ ಕುರಿತು ಮಾಹಿತಿ ಪಡೆಯಲಿದ್ದಾರೆ. ಈ ಸಂದರ್ಭ ಜನರ ಬದುಕಿಗೆ ನೆಮ್ಮದಿ ನೀಡಬಹುದಾದ ಪರಿಹಾರ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಯೂ ಇದೆ.

ಅಭಿವೃದ್ಧಿ ವೇಗೋತ್ಕರ್ಷದ ನಿರೀಕ್ಷೆ

ಬಜೆಟ್‌ ಅಧಿಕೃತವಾಗಿ ಅನುಷ್ಠಾನ ಗೊಳ್ಳುವ ದಿನವೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರಾವಳಿಗೆ ಭೇಟಿ ನೀಡು ತ್ತಿರು ವುದು ಉಭಯ ಜಿಲ್ಲೆಗಳ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿಯವರ ಈ ಭೇಟಿ ಅಭಿವೃದ್ಧಿಗೆ ಹೊಸ ವೇಗೋತ್ಕರ್ಷ ಒದಗಿಸುವ ನಿರೀಕ್ಷೆ ಹೊಂದಲಾಗಿದೆ.

ಮೀನುಗಾರಿಕೆಗೆ ಪ್ರೋತ್ಸಾಹ

ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ಹಲವು ಕ್ರಮಗಳನ್ನು ಘೋಷಿಸಿದ್ದರು. ಮೀನುಗಾರಿಕೆ ದೋಣಿಗಳ ಸೀಮೆಎಣ್ಣೆ ಎಂಜಿನ್‌ಗಳನ್ನು ಪೆಟ್ರೋಲ್‌ ಅಥವಾ ಡೀಸೆಲ್‌ಗೆ ಪರಿವರ್ತಿಸಲು ಸಹಾಯಧನ, ಮೀನುಗಾರರ ದೋಣಿಗಳಿಗೆ ನೀಡಲಾಗುತ್ತಿದ್ದ ರಿಯಾಯಿತಿ ದರದ ಡೀಸೆಲನ್ನು 2 ಲಕ್ಷ ಕಿ.ಲೀ.ವರೆಗೆ ಹೆಚ್ಚಿಸಲು 250 ಕೋಟಿ ರೂ. ಮೀಸಲಿರಿಸಿದ್ದು, ಮೀನುಗಾರ ಮಹಿಳೆಯರ ಬಡ್ಡಿರಹಿತ ಸಾಲದ ಮಿತಿಯನ್ನು 3 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ್ದು, ಮೀನು ಉತ್ಪಾದನೆಗೆ ಪ್ರೋತ್ಸಾಹ ಘೋಷಿಸಿದ್ದರು.

ಕರಾವಳಿಗೆ ಸಿದ್ದರಾಮಯ್ಯ ಬಜೆಟ್‌ ಕೊಡುಗೆ

ಜುಲೈ 7ರಂದು ತಮ್ಮ 14ನೇ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ ಕರಾವಳಿಗೆ ಹಲವು ಕೊಡುಗೆಗಳನ್ನು ಪ್ರಕಟಿಸಿದ್ದರು. ಅಲ್ಪಸಂಖ್ಯಾಕ ಯುವಜನರಿಗೆ ಕೌಶಲ ತರಬೇತಿ, ಧರ್ಮಸ್ಥಳ ದಲ್ಲಿ ಹೊಸ ಏರ್‌ಸ್ಟ್ರಿಪ್‌ ಅಭಿವೃದ್ಧಿಗೆ ಕ್ರಮ, ಸಮಗ್ರ ಕರಾವಳಿ ನಿರ್ವಹಣ ಸಮಿತಿ ಸಶಕ್ತೀ ಕರಣ, ರಫ್ತು ಆಧಾರಿತ ಕೈಗಾರಿಕ ಕ್ಲಸ್ಟರ್‌ ಅಭಿ ವೃದ್ಧಿ, ಕರಾವಳಿ ಬೀಚ್‌ ಪ್ರವಾಸೋದ್ಯಮ ಕಾರ್ಯಪಡೆ ರಚನೆ, ಸಸಿಹಿತ್ಲು ಕಡಲ ತೀರ ಅಂತಾರಾಷ್ಟ್ರೀಯ ಸರ್ಫಿಂಗ್‌ ತಾಣವಾಗಿ ಅಭಿವೃದ್ಧಿ, ಕರಾವಳಿ ವಿಪತ್ತು ಪರಿಹಾರಕ್ಕೆ ಒತ್ತು, ಕೃಷಿಗಾಗಿ ಪಿಕ್‌ಅಪ್‌ ವ್ಯಾನ್‌ಗೆ
ಸಾಲ, ಮಲ್ಪೆ, ಕುಂದಾಪುರ, ಭಟ್ಕಳ ಬಂದರಿ ನಲ್ಲಿ ಹೂಳೆತ್ತಲು ಕ್ರಮ ಪ್ರಕಟಿಸಿದ್ದರು.

You cannot copy content from Baravanige News

Scroll to Top