ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾವನ್ನು ಸಿಗರೇಟು ಮಾದರಿ ಸುರುಳಿ ಸುತ್ತಿ ಸೇದುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಒಟ್ಟು 9 ಮಂದಿಯನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರತ್ಯೇಕ ಮೂರು ಪ್ರಕರಣದಲ್ಲಿ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಕಳ ಗಾಂಧಿ ಮೈದಾನದ ಸಮೀಪ ರಸ್ತೆ ಬಳಿ ತೆಳ್ಳಾರು ಜಲದುರ್ಗಾ ದೇವಸ್ಥಾನ ಬಳಿಯ ನಿವಾಸಿ ಭುವನೇಶ (27) ಮತ್ತು ಜರಿಗುಡ್ಡೆಯ ಶ್ರೀಕಾಂತ (23), ಕಾರ್ಕಳ ಬಂಗ್ಲೆಗುಡ್ಡೆ ಮಟನ್ ಸ್ಟಾಲ್ ಸಮೀಪ ಕಿರಣ, ನಜೀರ್ ಸಾಬ್ ಮತ್ತು ಅಭಯ್ ಎಂಬವರನ್ನು ಗಾಂಜಾ ಸೇವನೆ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಗಾಂಜಾ ಮಾರಾಟ
ಮಿಯ್ಯಾರು ಗ್ರಾಮದ ಕಾರೋಲ್‌ಗುಡ್ಡೆ ಬಳಿ ಕರೋಲ್‌ಗುಡ್ಡೆಯ ನರೇಂದ್ರ (40), ಸಾಣೂರು ಗ್ರಾಮ ಪುಕ್ಕೇರಿಯ ಸಿರಾಜ್ (21) ಮತ್ತು ದುರ್ಗಾ ಗ್ರಾಮ ತೆಳ್ಳಾರು ಮೇಲಿನಪಲ್ಕೆಯ ಅಬ್ದುಲ್ ಆರೀಫ್ (26) ಮತ್ತು ಕೌಡೂರು ಗ್ರಾಮದ ಅಂಗಡಿಮನೆಯ ಜೀವನ (25) ಎಂಬವರನ್ನು ಗಾಂಜಾ ಮಾರಾಟದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ 194 ಗ್ರಾಂ ಮಾದಕ ವಸ್ತು, ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳು, ಗಾಂಜಾ ಮಾರಾಟ ಮಾಡಿ ಗಳಿಸಿದ 1,500 ರೂ. ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಗಾಂಜಾದ ಮೌಲ್ಯ 10,500 ರೂ. ಒಟ್ಟು ನಗದು 1,800 ರೂ. ಹಾಗೂ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ಕಾರ್ಕಳ ನಗರ ಠಾಣೆ ಎಸ್‌ಐ ಸಂದೀಪ್ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.