ಉಪ್ಪುಂದ : ದೋಣಿ ದುರಂತ: ನಾಪತ್ತೆಯಾದ ಮೀನುಗಾರನ ಶವ ಪತ್ತೆ

ಉಪ್ಪುಂದ : ಮೆಡಿಕಲ್‌ ಕರ್ಕಿಕಳಿ ಕಡಲ ತೀರದಲ್ಲಿ ಸೋಮವಾರ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಲ್ಲಿ ನಾಪತ್ತೆಯಾದ ಸತೀಶ್‌ ಖಾರ್ವಿ (30) ಅವರ ಶವ ಮಂಗಳವಾರ ತಡರಾತ್ರಿ ಉಪ್ಪುಂದ ಕೊಡೇರಿ ಸಿ ವಾಕ್‌ನ ಬಲ ಬದಿಯಲ್ಲಿ ಪತ್ತೆಯಾಗಿದೆ.

ಮೀನುಗಾರಿಕೆ ನಡೆಸಿ ವಾಪಸ್‌ ಬರುವಾಗ ಸಂಭವಿಸಿದ ದೋಣಿ ಅವಘಡದಲ್ಲಿ ಒಬ್ಬರು ಮೃತಪಟ್ಟಿದ್ದು ಇನ್ನೊಬ್ಬರು ನಾಪತ್ತೆಯಾಗಿದ್ದರು. ಅವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆದಿತ್ತು. ಈ ಅವಘಡದಲ್ಲಿ ನಾಗೇಶ್‌ (29) ಮೃತಪಟ್ಟಿದ್ದರು.

ಡ್ರೋನ್‌ ಕೆಮರಾ ಬಳಕೆ

ಮಂಗಳವಾರ ಬೈಂದೂರು ಠಾಣೆಯ ಮಹೇಶ್‌ ಮತ್ತು ಸಿಬಂದಿ ಹಾಗೂ ಗಂಗೊಳ್ಳಿಯ ಕರಾವಳಿ ಕಾವಲು ಪೊಲೀಸ್‌ ಠಾಣೆಯ ಪಿಐ ನಂಜಪ್ಪ ಮತ್ತು ಸಿಬಂದಿ ಮಲ್ಪೆಯ ಕರಾವಳಿ ಕಾವಲು ಪೊಲೀಸರ ಮಾರ್ಗದರ್ಶನದಲ್ಲಿ ಡ್ರೋನ್‌ ಕೆಮರಾ ಬಳಸಿ ನಾಪತ್ತೆತಾದ ಮೀನುಗಾರನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿವರ ಭೇಟಿ

ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಅವಘಡದ ಸ್ಥಳಕ್ಕೆ ಭೇಟಿ ನೀಡಿ ಮೀನುಗಾರರ ಕುಟುಂಬದವರಿಗೆ ಸಾಂತ್ವನ ಹೇಳಿದರು. ತಲಾ 6 ಲಕ್ಷ ರೂ.ಗಳ ಪರಿಹಾರದ ಚೆಕ್‌ ಹಸ್ತಾಂತರಿಸಿದರು. ಮೀನುಗಾರರ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Scroll to Top