ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣ ಕೇಸ್ : ತನಿಖಾಧಿಕಾರಿ ಬದಲಾಗುತ್ತಿದ್ದಂತೆಯೇ ತನಿಖೆ ಚುರುಕು

ಉಡುಪಿ : ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಬೆಳ್ಳಿಯಪ್ಪ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದ್ದು, ಆರೋಪಿತರ ಸ್ನೇಹಿತರ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ಪೊಲೀಸರ ತಂಡ ಮೊಬೈಲ್ಗಳನ್ನು ಪರಿಶೀಲನೆ ನಡೆಸುತ್ತಿದೆ. ಇನ್ನು ಕಳೆದ ವಾರ ಮಳೆಯ ಕಾರಣಕ್ಕೆ ಕಾಲೇಜಿಗೆ ರಜೆ ಇತ್ತು. ಇದೀಗ ಮಳೆ ಕಡಿಮೆಯಾದ ಹಿನ್ನೆಲೆ ಸೋಮವಾರದಿಂದ ಕಾಲೇಜು ಆರಂಭವಾಗಬೇಕಿತ್ತು. ಆದರೆ ಕಾಲೇಜಿನ ಶೈಕ್ಷಣಿಕ ವಾತಾವರಣ ಕೆಡಬಾರದೆಂದು ಅನಿರ್ದಿಷ್ಟಾವಧಿಗೆ ರಜೆ ಮುಂದುವರಿಸಿದ ಕಾಲೇಜು ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

ಈ ಹಿಂದೆ ಕಾಲೇಜಿಗೆ ಐಜಿಪಿ ಭೇಟಿ ನೀಡಿದ್ದ ಹಿನ್ನೆಲೆ ಉಡುಪಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ವೇಳೆ ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಯನ್ನು ಮಹಿಳಾ ಅಧಿಕಾರಿಗಳು ದಾಖಲಿಸಿಕೊಂಡಿದ್ದರು. ಅಲ್ಲದೇ ಸ್ಥಳದಲ್ಲಿ ಆಪರೇಟ್ ಆಗುತ್ತಿದ್ದ ಎಲ್ಲ ಮೊಬೈಲ್ಗಳ ಕಾಲ್ ಡೀಟೇಲ್ಸ್ಗಳನ್ನು ಪತ್ತೆ ಹಚ್ಚಿದ್ದರು. ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದರು. ಜೊತೆಗೆ ಅನಗತ್ಯ ವ್ಯಕ್ತಿಗಳು ಕಾಂಪೌಂಡ್ ಆವರಣದಲ್ಲಿ ಓಡಾಟ ಆರೋಪ ಕೇಳಿಬಂದಿದ್ದ ಹಿನ್ನೆಲೆ ಕಾಲೇಜು ಆವರಣದಲ್ಲಿನ ಸಿಸಿ ಕ್ಯಾಮರಾಗಳ ಫೂಟೇಜ್ನ್ನು ವಶಕ್ಕೆ ಪಡೆಯಲಾಗಿತ್ತು.

ತನಿಖಾಧಿಕಾರಿ ಬದಲಾವಣೆ
ಪ್ರಕರಣವನ್ನು ಮುಂದಿಟ್ಟುಗೊಂಡು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಸಂಬಂಧ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿತ್ತು. ಅಲ್ಲದೇ ಆರಂಭದಿಂದ ಪ್ರಕರಣದ ತನಿಖೆ ನಡೆಸಿಕೊಂಡು ಬಂದಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡರನ್ನು ಬದಲಾಯಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.

ಈ ಹಿನ್ನೆಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಲ್ಪೆ ಇನ್ಸ್ಪೆಕ್ಟರ್ ಮಂಜುನಾಥ್ ಗೌಡ ಅವರನ್ನು ಬದಲಾವಣೆ ಮಾಡಿ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯನ್ನಾಗಿ ಉಡುಪಿ ಎಸ್ಪಿ ಅಕ್ಷಯ್ ನೇಮಕ ಮಾಡಿದ್ದರು. ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣ ಮತ್ತು ಶಿರೂರು ಸ್ವಾಮೀಜಿ ಸಾವು ಪ್ರಕರಣದಲ್ಲೂ ದಕ್ಷ ತನಿಖಾಧಿಕಾರಿಯಾಗಿ ಬೆಳ್ಳಿಯಪ್ಪ ಅವರು ಕಾರ್ಯನಿರ್ವಹಿಸಿದ್ದರು.

You cannot copy content from Baravanige News

Scroll to Top