ಗಣರಾಜ್ಯೋತ್ಸವ ಪರೇಡ್: ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ತಿರಸ್ಕರಿಸಿ ವಿವಾದ ಸೃಷ್ಟಿ ಮಾಡಿದ ಕೇಂದ್ರ ಸರಕಾರ.

ನವದೆಹಲಿ : ಪ್ರತಿವರ್ಷದಂತೆ ಗಣರಾಜ್ಯೋತ್ಸವ ಪರೇಡ್‌ಗೆ ಸಿದ್ದತೆಗಳು ನಡೆದಿವೆ. ಪರೇಡ್‌ ಸಂದರ್ಭದಲ್ಲಿ ವಿವಿಧ ರಾಜ್ಯಗಳು ಸ್ತಬ್ಧಚಿತ್ರಗಳನ್ನು ಪ್ರದರ್ಶಿಸುತ್ತವೆ. ಆದರೆ ಕೇಂದ್ರ ಸರಕಾರ ಈ ಬಾರಿ ಕೇರಳದ ನಾರಾಯಣಗುರು ಸ್ತಬ್ದಚಿತ್ರವನ್ನು ತಿರಸ್ಕರಿಸುವ ಮೂಲಕ ವಿವಾದವನ್ನು ಸೃಷ್ಟಿಸಿದೆ.

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆಯಾ ರಾಜ್ಯಗಳು ಸ್ತಬ್ದಚಿತ್ರಗಳನ್ನು ಪ್ರದರ್ಶಿಸುತ್ತವೆ. ಅದರಂತೆ ಕೇರಳ ಸರಕಾರ ನಾರಾಯಣಗುರು ಸ್ತಬ್ದ ಚಿತ್ರದ ಪ್ರಸ್ತಾಪವನ್ನು ಕಳಿಸಿತ್ತು. ಕೇರಳ ಕಳಿಸಿದ್ದ ʼಶ್ರೀ ನಾರಾಯಣ ಗುರುʼ ಹಾಗೂ ʼಜಟಾಯುಪ್ಪಾರʼದ ಪ್ರತಿಕೃತಿಗಳನ್ನು ಕೇಂದ್ರ ಸರಕಾರವು ತಿರಸ್ಕರಿಸಿ, ಆದಿ ಶಂಕರಾಚಾರ್ಯರ ಪ್ರತಿಮೆ ಇಡಬೇಕೆಂದು ಸೂಚಿಸಿದೆ ಎಂದು ಮಲಿಯಾಳಂ ಪತ್ರಿಕೆಗಳು ವರದಿ ಮಾಡಿವೆ.

ಕೇರಳದ ಪ್ರಮುಖ ಪತ್ರಿಕೆಯಾಗಿರುವ ಮಾತೃಭೂಮಿಯು ಈ ಕುರಿತು ವರದಿ ಮಾಡಿದೆ. “ಕೇರಳ ಸರಕಾರವು ಜಟಾಯುಪ್ಪಾರದ ಹಿನ್ನೆಲೆಯುಳ್ಳ, ಮಹಿಳಾ ಸಬಲೀಕರಣವನ್ನು ಮತ್ತು ಪ್ರವಾಸೋದ್ಯಮವನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವದ ಪರೇಡ್‌ ನಲ್ಲಿ ಪ್ರದರ್ಶಿಸಲು ಉದ್ದೇಶಿಸಿತ್ತು. ಇದರೊಂದಿಗೆ ಅದರ ಮುಂಭಾಗದಲ್ಲಿ ಮಹಾನ್ ಧಾರ್ಮಿಕ ಸುಧಾರಕರಾದ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಇರಿಸುವುದಾಗಿ ಕೇಂದ್ರ ಸರಕಾರಕ್ಕೆ ಕಳಿಸಿದ್ದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು.

“ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳು” ಎಂಬ ವಿಷಯವನ್ನು ಇದು ಆಧರಿಸಿದೆ. ಈ ಸ್ತಬ್ಧ ಚಿತ್ರಗಳನ್ನು ಮೌಲ್ಯಮಾಪನ ಮಾಡಲು ಮತ್ತು ಶಿಫಾರಸು ಮಾಡಲು ರಕ್ಷಣಾ ಸಚಿವಾಲಯವು ನೇಮಿಸಿದ ತೀರ್ಪುಗಾರರು ಎಲ್ಲಾ ಐದು ಸುತ್ತಿನ ಚರ್ಚೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದರು. ಡಿಸೆಂಬರ್ 18 ರಂದು ನಡೆದ ಅಂತಿಮ ಸುತ್ತಿನಲ್ಲಿ ತೀರ್ಪುಗಾರರು ಈ ಸ್ಕೆಚ್ ಅನ್ನು ಅನುಮೋದಿಸಿದರು ಮತ್ತು ಸಂಗೀತ ಸಂಯೋಜಿಸಲು ನಿರ್ದೇಶಿಸಿದ್ದರು.

ಈ ಸ್ತಬ್ಧ ಚಿತ್ರವನ್ನು ಅನುಮೋದಿಸಲಾಗಿದೆ ಎಂಬ ಪತ್ರ ಬರದಿದ್ದ ಕಾರಣ ಕೇರಳ ಸರಕಾರವು ಈ ಕುರಿತು ವಿಚಾರಿಸಿದಾಗ, ಅನುಮೋದನೆಗೊಂಡ 12 ರಾಜ್ಯಗಳ ಪಟ್ಟಿಯಲ್ಲಿ ಕೇರಳ ರಾಜ್ಯದ ಹೆಸರಿರಲಿಲ್ಲ ಎಂದು ತಿಳಿದು ಬಂದಿದೆ. ಕೇಂದ್ರ ಸರಕಾರ ಕೇರಳಕ್ಕೆ ಈ ರೀತಿ ಅವಮಾನ ಮಾಡುತ್ತಿರುವುದು ಇದೇ ಮೊದಲಲ್ಲ. 2019, 2020 ರಲ್ಲೂ ತಿರಸ್ಕಾರ ಮಾಡಿ ಪರೇಡ್‌ ನಿಂದ ಹೊರಹಾಕಿತ್ತು. ಇನ್ನೊಂದು ಪ್ರಮುಖ ಸಂಗತಿ ಎಂದರೆ ಕೇರಳದ ಸ್ತಬ್ಧ ಚಿತ್ರವು ಈ ಹಿಂದೆ ಐದು ಬಾರಿ ಪ್ರಶಸ್ತಿ ಗೆದ್ದಿದೆ.

ನಾರಾಯಣಗುರುಗಳ ಪ್ರತಿಮೆಯ ಸ್ಥಬ್ಧಚಿತ್ರವನ್ನು ತಿರಸ್ಕರಿಸಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಒಕ್ಕೂಟ ಸರಕಾರದ ಈ ನಿಲುವನ್ನು ಜನರು ಖಂಡಿಸುತ್ತಿದ್ದಾರೆ

You cannot copy content from Baravanige News

Scroll to Top