ಬ್ರಹ್ಮಾವರ: ತಾಲೂಕು ಕೇಂದ್ರವಾಗಿರುವ ಬ್ರಹ್ಮಾವರದಲ್ಲಿ ಆ.5 ರಂದು ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಕಟ್ಟಡ ಉದ್ಘಾಟನೆಗೊಳ್ಳಲಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷರಾದ ಕಾಡೂರು ಪ್ರವೀಣ್ ಶೆಟ್ಟಿ ಅವರು, ಆ.5 ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ ನ್ಯಾಯಾಲಯವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಂಗ ಕಟ್ಟಡ ಸಮಿತಿಯ ಅಧ್ಯಕ್ಷರಾದ ಪಿ.ಎಸ್. ದಿನೇಶ್ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಕರ್ನಾಟಕ ಉಚ್ಚನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಂ.ಐ, ಅರುಣ್ ವಹಿಸಲಿದ್ದಾರೆ ಎಂದರು.
ಸಮಾರಂಭದ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರಕಾರದ ಕಾನೂನು ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೋಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ಭಾಗವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ, ಶಿವಮೊಗ್ಗ ಕೇಂದ್ರ ವಲಯದ ಲೋಕೋಪಯೋಗಿ ಇಲಾಖೆಯ ಪ್ರಧಾರ ಮುಖ್ಯ ಅಭಿಯಂತರ ಕೆ.ಜಿ.ಜಗದೀಶ್ ಭಾಗವಹಿಸಲಿದ್ದಾರೆ. ಉದ್ಘಾಟನೆಯ ನಂತರ ಬ್ರಹ್ಮಾವರ ಬಂಟರ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ಹಳೆಯ ಕಟ್ಟಡವನ್ನು ನವೀಕರಿಸಿ ನ್ಯಾಯಾಲಯ ನಿರ್ಮಿಸಲು ಮತ್ತು ನ್ಯಾಯಾಲಯಕ್ಕೆ ಬೇಕಾದ ಎಲ್ಲಾ ಪೀಠೋಪಕರಣ ಹಾಗೂ ಇತರ ಮೂಲ ಸೌಕರ್ಯಗಳಿಗೆ ಸರ್ಕಾರದಿಂದ ರೂ. 87ಲಕ್ಷ ಅನುದಾನ ಮಂಜೂರಾಗಿದ್ದು ಇದರಿಂದ ಸುಂದರವಾದ ನ್ಯಾಯಾಲಯ ನಿರ್ಮಿಸಲಾಗಿದೆ. ವಕೀಲರಿಗೆ, ಶಿರಸ್ತೆದಾರರಿಗೆ, ಸರಕಾರಿ ವಕೀಲರಿಗೆ ಹೀಗೆ ಎಲ್ಲರಿಗೂ ಬೇಕಾದ ಪ್ರತ್ಯೇಕ ಕೊಠಡಿಗಳು, ಕೋರ್ಟ್ ಕಲಾಪಕ್ಕೆ ಬೇಕಾದ ಸಭಾಂಗಣ, ಫರ್ನಿಚರ್, ಶೌಚಾಲಯ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಿಂದೆ ಬ್ರಿಟೀಷರು ಬಾರ್ಕೂರಿನಲ್ಲಿ ಕೋರ್ಟ್ ಆರಂಭಿಸಿದ್ದು ಮುಂದೆ ಅದು ಉಡುಪಿಗೆ ಸ್ಥಳಾಂತರಗೊಂಡಿತ್ತು. ಇದೀಗ ಜನರ ಅನುಕೂಲಕ್ಕೆ ಬ್ರಹ್ಮಾವರ ತಾಲೂಕು ಕೇಂದ್ರದಲ್ಲಿ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಉದ್ಘಾಟನೆಗೊಳ್ಳುತ್ತಿದೆ. ನ್ಯಾಯಾಲಯದ ಪ್ರಕ್ರಿಯೆಯಂತ ಮೊದಲು ಪ್ರಾಥಮಿಕ ಸಂಚಾರಿ ಪೀಠ ಆರಂಭಿಸಿ ಕ್ರಮೇಣ ಖಾಯಂ ಪೀಠಕ್ಕೆ ಅನುಮೋದನೆ ನೀಡಲಾಗುತ್ತದೆ.
ಬ್ರಹ್ಮಾವರ ನ್ಯಾಯಾಲಯದ ವ್ಯಾಪ್ತಿಗೆ ಬ್ರಹ್ಮಾವರ ಹಾಗೂ ಕೋಟ ಹೋಬಳಿಯ 52 ಗ್ರಾಮಗಳ ಪ್ರಕರಣಗಳು ಈ ನ್ಯಾಯಾಲಯದಲ್ಲಿ ಇತ್ಯರ್ಥವಾಗಲಿವೆ. ಸಿವಿಲ್, ಕ್ರಿಮಿನಲ್, ಚೆಕ್ ಬೌನ್ಸ್ ಹಾಗೂ ಇತರ ಪ್ರಕರಣಗಳು ಸೇರಿ 4000 ಕ್ಕೂ ಮಿಕ್ಕಿ ಕೇಸುಗಳು ಬ್ರಹ್ಮಾವರ ನ್ಯಾಯಾಲಯಕ್ಕೆ ಬರಲಿವೆ. ಬ್ರಹ್ಮಾವರದಲ್ಲಿ ನ್ಯಾಯಾಲಯ ಆರಂಭಗೊಳ್ಳುವುದರಿಂದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಜನರಿಗೆ ಹತ್ತಿರದಲ್ಲೇ ನ್ಯಾಯದಾನದ ವ್ಯವಸ್ಥೆಯಾಗಲಿದೆ. ಜನರ ಹಣ ಹಾಗೂ ಸಮಯ ಉಳಿತಾಯವಾಗಲಿದೆ. ಗ್ರಾಮೀಣ ಭಾಗದ ಜನರು ಉಡುಪಿ ಹಾಗೂ ಕುಂದಾಪುರದ ನ್ಯಾಯಾಲಯದಲ್ಲಿ ಕೆಲವೊಮ್ಮೆ ಸಂಜೆ ತನಕ ಕಾದು ನಂತರ ಬಸ್ಸಿನ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸಿದ್ದು ಇನ್ನು ಮುಂದೆ ಆ ಸಮಸ್ಯೆ ನಿವಾರಣೆಯಾಗಲಿದೆ. ತಾಲೂಕು ಮಟ್ಟದಲ್ಲೇ ಕೋರ್ಟ್ ನಿರ್ಮಾಣಗೊಂಡಿರುವುದ ರಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶೀಘ್ರ ನ್ಯಾಯದಾನ ದೊರಕಬೇಕೆಂಬ ಆಶಯ ಈಡೇರಲಿದೆ.
ಬ್ರಹ್ಮಾವರ ವಕೀಲರ ವೇದಿಕೆಯಲ್ಲಿ ಒಟ್ಟು 65 ಮಂದಿ ಸದಸ್ಯರಿದ್ದು ಮುಂದೆ ಕುಂದಾಪುರ ಹಾಗೂ ಉಡುಪಿಯ ವಕೀಲರು ಕೂಡ ಕೇಸು ನಡೆಸಲು ಬ್ರಹ್ಮಾವರಕ್ಕೆ ಆಗಮಿಸಲಿದ್ದಾರೆ. ಏನಿಲ್ಲವೆಂದರೂ ಸುಮಾರು 100 ಮಂದಿ ವಕೀಲರು ಹಾಗೂ ನೂರಾರು ಕಕ್ಷಿದಾರರ ಚಟುವಟಿಕೆ ಬ್ರಹ್ಮಾವರ ಕೋರ್ಟ್ನಲ್ಲಿ ನಡೆಯಲಿದೆ. ಬ್ರಹ್ಮಾವರದ ಅಭಿವೃದ್ಧಿಯಲ್ಲಿ ಕೋರ್ಟ್ ಚಟುವಟಿಕೆ ಪ್ರಮುಖ ಪಾತ್ರ ವಹಿಸಲಿದ್ದು ಈ ಕೋರ್ಟ್ ಉದ್ಘಾಟನೆಯ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿಕೊಳ್ಳುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಬ್ರಹ್ಮಾವರ ವಕೀಲರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬ್ರಹ್ಮಾವರ ವಕೀಲರ ಸಂಘದ ಕಾರ್ಯದರ್ಶಿ ಶ್ರೀಪಾದರಾವ್, ಖಚಾಂಚಿ ಸ್ಟೀವನ್ ಲೂವಿಸ್, ಜೊತೆ ಕಾರ್ಯದರ್ಶಿ ಮಹಮ್ಮದ್ ಸುಹಾನ್ ಉಪಸ್ಥಿತರಿದ್ದರು.