ಪಿಲಾರು : ಕಾಡುಕೋಣಗಳ ಹಾವಳಿ ; ಅಪಾರ ಹಾನಿ : ಕ್ರಮಕ್ಕೆ ಆಗ್ರಹ

ಶಿರ್ವ : ಸಮೀಪದ ಪಿಲಾರು ಕುಂಜಿಗುಡ್ಡೆ ಪೆರ್ಗೊಟ್ಟು ನಿವಾಸಿ ರವಿ ಕುಲಾಲ್‌ ಅವರ ಕೃಷಿ ಭೂಮಿಗೆ ಸುಮಾರು 5-6 ಕಾಡುಕೋಣಗಳ ಹಿಂಡು ದಾಳಿ ನಡೆಸಿ ಭತ್ತದ ಗದ್ದೆಯಲ್ಲಿ ಓಡಾಡಿದ್ದು, ಗದ್ದೆಯಲ್ಲಿದ್ದ ಭತ್ತದ ಪೈರು ನಾಶವಾಗಿ ಅಪಾರ ಹಾನಿಯಾಗಿದೆ.

ಕಳೆದ ಜು.29 ರಂದು ಮುಂಜಾನೆ ಅವರ ಮನೆಯ ಅಂಗಳಕ್ಕೆ ಕಾಡುಕೋಣವೊಂದು ಬಂದಿದ್ದು, ಮನೆಯ ಮುಂದೆ ಬಾವಿಕಟ್ಟೆಯ ಬಳಿ ಸುತ್ತಾಡಿ ಕಾಡಿಗೆ ತೆರಳಿತ್ತು.

ಪಿಲಾರುಕಾನ ರಕ್ಷಿತಾರಣ್ಯದ ಪ್ರದೇಶದ ಸುತ್ತ ತಂತಿ ಬೇಲಿ ಹಾಕಲಾಗಿದ್ದರೂ ಕೆಲವೆಡೆ ದಾರಿ ಇರುವುದರಿಂದಾಗಿ ಕಾಡುಕೋಣಗಳ ಹಿಂಡು ಕೃಷಿ ಭೂಮಿಗೆ ದಾಳಿ ನಡೆಸುತ್ತಿವೆ. ಕಾಡುಕೋಣಗಳ ಹಿಂಡು ಕೃಷಿ ಭೂಮಿಗೆ ಲಗ್ಗೆ ಇಡುತ್ತಿದ್ದು, ಸೂಡ, ಪಿಲಾರು ಗ್ರಾಮದ ಮಜಲಬೆಟ್ಟು, ಮಿತ್ತಬೆಟ್ಟು, ಕುದ್ರೆಬೆಟ್ಟು, ಗುಂಡುಪಾದೆ ಬಳಿ ಕಾಡಿನಂಚಿನಲ್ಲಿ ಬೆಳೆದ ಭತ್ತದ ಗದ್ದೆ, ತರಕಾರಿ, ಬಾಳೆ, ಅಡಿಕೆ ಮತ್ತಿತರ ಕೃಷಿಯನ್ನು ಹಾಳುಗೆಡವುತ್ತಿವೆ.

ಕಳೆದ ಕೆಲವು ದಿನಗಳ ಹಿಂದೆ ಪಿಲಾರು ನಿವಾಸಿ ಪ್ರಕಾಶ್‌ ಶೆಟ್ಟಿಯವರ ಕೃಷಿ ಭೂಮಿಗೆ ಕಾಡುಕೋಣಗಳ ಹಿಂಡು ದಾಳಿ ನಡೆಸಿದ್ದು, ಸುಮಾರು ನೂರಕ್ಕೂ ಹೆಚ್ಚು ಅಡಿಕೆ ಗಿಡ ಮತ್ತು ನೀರು ಹಾಯಿಸಲು ಹಾಕಿದ್ದ ಸ್ಪಿಂಕ್ಲರ್‌ಗಳನ್ನು ನಾಶ ಮಾಡಿದೆ.

ಪಿಲಾರುಕಾನ ರಕ್ಷಿತಾರಣ್ಯದ ಪ್ರದೇಶ, ಪಿಲಾರು ಮತ್ತು ಸೂಡ ಪರಿಸರದಲ್ಲಿ ಕಾಡುಕೋಣಗಳ ಹಾವಳಿ ವಿಪರೀತವಾಗಿದೆ. ಗ್ರಾಮಸ್ಥರು ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಕೃಷಿಕರು,ನಾಗರಿಕರು ಆಗ್ರಹಿಸುತ್ತಿದ್ದಾರೆ.

Scroll to Top