ಶಿರ್ವ,ಆ.05: ಮನೆಬಿಟ್ಟು ತೆರಳಿದ್ದ ವ್ಯಕ್ತಿಯೋರ್ವರು ವಾರದ ಬಳಿಕ ಶವವಾಗಿ ಪತ್ತೆಯಾದ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ರಬೆಟ್ಟು ಸುಳ್ಳೇದು ಬಳಿ ನಡೆದಿದೆ.
ಮಿತ್ರಬೆಟ್ಟು ಸುಳ್ಳೇದು ಮೇಲ್ಮನೆ ನಿವಾಸಿ ನಾಗರಾಜ ರಾವ್ (72) ಜು. 29 ರಂದು ಮಧ್ಯಾಹ್ನ 12-45ಕ್ಕೆ ತನ್ನ ಮನೆಯಿಂದ ಹೋದವರು ಕಾಣೆಯಾದ ಬಗ್ಗೆ ಪುತ್ರಿ ಪ್ರಶಾಂತಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ನಾಪತ್ತೆಯಾದ ನಾಗರಾಜ್ ಅವರ ಶವವು ಮನೆ ಸಮೀಪದ ಕೋಳಿ ಫಾರ್ಮ್ ಬಳಿಯ ಹಾಡಿಯ ಪೊದೆಯೊಂದರಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಅಸೌಖ್ಯದಿಂದ ಪೊದೆಯಿರುವ ಹಾಡಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ.