ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃಯಾಘಾತದಿಂದ ಮೃತಪಟ್ಟಿದ್ದಾರೆ. ಜೊತೆಗೆ ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ ಸೇರಿದಂತೆ ಅನೇಕರು ಇದೇ ಕಾರಣದಿಂದ ಮೃತಪಟ್ಟಿದ್ದಾರೆ. ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐ.ಸಿ.ಎಂ.ಆರ್.) ನಡೆಸಿದ ಅಧ್ಯಯನ ವರದಿಯಲ್ಲಿ ಬೆಚ್ಚಿ ಬೀಳಿಸುವ ವಿಷಯ ಬಹಿರಂಗಗೊಂಡಿದೆ. ಕೋವಿಡ್ ನಂತರ ಹೃದಯಾಘಾತಗಳ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ಗಮನಿಸಿ ಅದಕ್ಕೆ ಕಾರಣ ಹುಡುಕಲು ಮುಂದಾಗಿದೆ.
ಕೋವಿಡ್ ನಂತರ ಹೃದಯಾಘಾತ ಸಂಖ್ಯೆ ಹೆಚ್ಚಾಗಲು ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಕೆಲವರು ಇದಕ್ಕೆ ಕೋವಿಡ್ ಲಸಿಕೆ ಕಾರಣ ಎಂದು ಹೇಳುತ್ತಿದ್ದು ಈ ವಾದವನ್ನು ಐ.ಸಿ.ಎಂ.ಆರ್. ತಳ್ಳಿ ಹಾಕಿದೆ. ಈ ವರ್ಷದ ಮಾರ್ಚ್ ನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ. 1ರಿಂದ ಶೇ. 2.73ಕ್ಕೆ ಏರಿತ್ತು. ಆದರೆ ಇದಕ್ಕಿಂತ ಹೆಚ್ಚಾಗಿ ಹೃದಯ ಸಮಸ್ಯೆ ಕಾಣಿಸಿಕೊಂಡಿದೆ.
ಸದ್ಯ ಅಧ್ಯಯನ ಮುಂದುವರಿಸಿರುವ ಐ.ಸಿ.ಎಂ.ಆರ್. ಮುಂದಿನ ತಿಂಗಳ ವೇಳೆಗೆ ಉತ್ತರ ಕಂಡುಕೊಳ್ಳಲಿದೆ. ”ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಹೃದಯಾಘಾತ ಮತ್ತು ಹೃದಯ ಸ್ತಂಭನಗಳ ವರದಿ ಪಡೆದು ಪರಿಶೀಲನೆ ನಡೆಸಲಾಗುವುದು. ಕೋವಿಡ್ ಬಳಿಕ ಹೃದಯಾಘಾತಗಳ ಸಂಖ್ಯೆ ಹೆಚ್ಚಲು ಕಾರಣಗಳ ಅಧ್ಯಯನ ನಡೆಸುವ ಕುರಿತು ವಿಜ್ಞಾನಿಗಳೊಂದಿಗೆ ಸಭೆ ನಡೆಸಿದ್ದೇವೆ. ವ್ಯಾಕ್ಸಿನೇಶನ್ ಮತ್ತು ಕೊಮೊರ್ಬಿಡಿಟಿಯ ಡೇಟಾ ನಮ್ಮ ಬಳಿ ಇದೆ. ಇವುಗಳನ್ನು ಅಧ್ಯಯನ ಮಾಡಿ ಸಂಶೋಧಕರು ವರದಿ ನೀಡಲಿದ್ದಾರೆ” ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಮಾನವನ ಹೃದಯದ ಮೇಲೆ ಸಾಕಷ್ಟು ಒತ್ತಡ ಉಂಟು ಮಾಡುವುದೇ ದೀರ್ಘಾವಧಿಯ ಕೋವಿಡ್ ನ ಪ್ರಮುಖ ಲಕ್ಷಣ ಎನ್ನಲಾಗಿದೆ. ಈ ನಡುವೆ ಹೃದ್ರೋಗ ತಜ್ಞರು ಜಿಮ್ ನಲ್ಲಿ ಭಾರೀ ಪ್ರಮಾಣದಲ್ಲಿ ಮೈ ದಂಡಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.