ಉಡುಪಿ, ಆ.09: ದೇಶ ಉಳಿದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅನಿವಾರ್ಯ ಎಂದು ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರತಿಪಾದಿಸಿದ್ದಾರೆ.
ಅದಮಾರು ಮಠ ಆಶ್ರಯದ ಶ್ರೀಕೃಷ್ಣ ಸೇವಾ ಬಳಗ ಆಶ್ರಯದಲ್ಲಿ ಈ ತಿಂಗಳ 10ರಂದು ವಿಶ್ವಾರ್ಪಣಂ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹ ರಾಷ್ಟ್ರೀಯ ಸಂಯೋಜಕ ಜೆ. ನಂದಕುಮಾರ್ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಏಕೆ ಬೇಕು? ವಿಚಾರದಲ್ಲಿ ಮಾತನಾಡಲಿದ್ದು, ಆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶ್ರೀಗಳು ಸಂದೇಶ ನೀಡಿದ್ದಾರೆ.
ಕಾರ್ಯಕ್ರಮ ಅಂದು ಅಪರಾಹ್ನ 3.30ರಿಂದ ಆರಂಭವಾಗಲಿದೆ.
ಭಾರತದ ಸಂವಿಧಾನದಲ್ಲಿಯೂ ಏಕರೂಪ ಶಾಸನ ಬಗ್ಗೆ ಉಲ್ಲೇಖಿಸಲಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಜಾರಿಯಾಗಬೇಕಾಗಿದ್ದ ಈ ಸಂಹಿತೆ ವಿವಿಧ ಕಾರಣಗಳಿಂದ ಅನುಷ್ಠಾನವಾಗಿಲ್ಲ. ವಿವಾಹ, ವಿಚ್ಚೇದನ, ದತ್ತು, ವಾರೀಸುದಾರರ ಹಕ್ಕು ಇತ್ಯಾದಿಗಳ ಬಗ್ಗೆ ಈ ಸಂಹಿತೆಯಲ್ಲಿ ತಿಳಿಸಲಾಗಿದೆ. ದೇಶದ ಜನತೆಯ ಶೇ. 86ರಷ್ಟು ಮಂದಿ ಸಂಹಿತೆ ಜಾರಿಗೆ ಉತ್ಸುಕರಾಗಿದ್ದಾರೆ.
ದೇಶ ಎಂದಮೇಲೆ ಒಂದೇ ಮನಃಸ್ಥಿತಿಯ ಮಂದಿ ಇರಬೇಕು. ಈ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ಆ ಮೂಲಕ ದೇಶದ ಪ್ರಗತಿಗೆ ಸಹಕಾರಿಯಾಗಬೇಕು ಎಂದು ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.