ಬೆಂಗಳೂರು, ಆ.09: ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಮೊದಲನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಆರು ವರ್ಷ ತುಂಬಿರಬೇಕು ಎಂಬ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರು 2022ರ ಜುಲೈ 26ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ನಾಲ್ಕು ವರ್ಷದ ಪುತ್ರಿ ಪ್ರಸಕ್ತ ವರ್ಷದಲ್ಲಿ ಎಲ್‌ಕೆಜಿ ಕಲಿಯಲು ಅನುಮತಿಸಬೇಕು ಎಂದು ಕೋರಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಪ್ರಕರಣದ ಹಿನ್ನೆಲೆ
ಬೆಂಗಳೂರಿನ ಥಣಿಸಂದ್ರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ತಮ್ಮ ಪುತ್ರಿಯನ್ನು ಪ್ರಸಕ್ತ ವರ್ಷ ಎಲ್‌ಕೆಜಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಆಕೆಯ ಪೋಷಕರು ಕೋರಿದ್ದರು. ಈ ಸಂಬಂಧ ಶಾಲೆಯು ಶುಲ್ಕವನ್ನೂ ವಸೂಲಿ ಮಾಡಿತ್ತು.
ಮಗುವು 2023ರ ಜೂನ್ 1ಕ್ಕೆ ಸರಿಯಾಗಿ ನಾಲ್ಕು ವರ್ಷ ಪೂರ್ಣಗೊಳಿಸದಿರುವುದರಿಂದ ಆಕೆ ಎಲ್‌ಕೆಜಿಗೆ ಪ್ರವೇಶ ಪಡೆಯಲು ಅರ್ಹಳಲ್ಲ ಎಂದು ಶಾಲೆಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕರ 2018ರ ಮೇ 23ರ ಆದೇಶ ಉಲ್ಲೇಖಿಸಿ (ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ನಿಗದಿ ಮಾಡಿರುವ ಆದೇಶ) 2023ರ ಮೇ 27ರಂದು ಪೋಷಕರಿಗೆ ಶಾಲೆಯು ಈಮೇಲ್ ಕಳುಹಿಸಿತ್ತು. ಮಗುವನ್ನು ನರ್ಸರಿಯಲ್ಲೇ ಉಳಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿತ್ತು. 2018ರ ಮೇ 23ರ ಆದೇಶದಲ್ಲಿ ರಾಜ್ಯ ಸರ್ಕಾರವು ಒಂದನೇ ತರಗತಿ ಪ್ರವೇಶಕ್ಕೆ 2025-26ನೇ ಸಾಲಿನಲ್ಲಿ ಆರು ವರ್ಷ ತುಂಬಿರಬೇಕು ಎಂದು ಹೇಳಿತ್ತು.