ಉಡುಪಿ ವಿಡಿಯೋ ಪ್ರಕರಣ – ಸಂತ್ರಸ್ಥೆಯಿಂದ ಹೇಳಿಕೆ ಪಡೆದ ಸಿಐಡಿ

ಉಡುಪಿ : ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣದ ಸಂತ್ರಸ್ಥೆ ವಿದ್ಯಾರ್ಥಿನಿಯಿಂದ ಬುಧವಾರ ಸಿಐಡಿ ಪೊಲೀಸರು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಉಡುಪಿ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸೋಮವಾರ ಹಠಾತ್ ಸಿಐಡಿಗೆ ಒಪ್ಪಿಸಿದೆ. ಸಿಐಡಿ ಡಿವೈಎಸ್ಪಿಅಂಜುಮಾಲ ನಾಯಕ್ ನೇತೃತ್ವದಲ್ಲಿ ಸಿಐಡಿ ತಂಡ ಮಂಗಳವಾರ ಉಡುಪಿಗೆ ಆಗಮಿಸಿ ತನಿಖೆ ಆರಂಭಿಸಿದೆ.


ಬುಧವಾರ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಅವರು ಕಾಲೇಜಿಗ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲಿಸಿದರು. ನಂತರ ಸಂತ್ರಸ್ಥೆಯನ್ನು ಕಾಲೇಜಿಗೆ ಬರ ಮಾಡಿಕೊಂಡು ಆಕೆಯಿಂದ ಹೇಳಿಕೆಯನ್ನೂ ಪಡೆದರು. ಆಳೆತ್ತರದ ಗೊಂಬೆಯನ್ನು ಕಾಲೇಜಿನ ಶೌಚಾಲಯದ ಎದುರು ನಿಲ್ಲಿಸಿ ಘಟನೆಯ ಮರುಸೃಷ್ಟಿ ಮಾಡುವುದರ ಮೂಲಕ ತನಿಖೆಯನ್ನು ನಡೆಸಲಾಯಿತು. ಸಂತ್ರಸ್ಥೆ ಇನ್ನೂ ತನ್ನ ಮೇಲಾಗಿರುವ ದೌರ್ಜನ್ಯದ ಬಗ್ಗೆ ದೂರು ನೀಡಿಲ್ಲ, ಆದ್ದರಿಂದ ಆಕೆಯ ಹೇಳಿಕೆಯೇ ಈಗ ಸಿಐಡಿಗೆ ಮುಖ್ಯ ಸಾಕ್ಷ್ಯವಾಗಲಿದೆ.


ಸಿಐಡಿಯ ಇನ್ನೊಂಡು ತಂಡ ಉಡುಪಿ ಪೊಲೀಸರು ಹಸ್ತಾಂತರಿಸಿರುವ ಕಾಲೇಜಿನ ಮತ್ತು ಅಕ್ಕಪಕ್ಕದ ಸಿಸಿ ಕ್ಯಾಮರಗಳ ದೃಶ್ಯಾವಳಿಗಳನ್ನು ಪರಿಶೀಲಿಸಿತು. ಕಾಲೇಜಿನ ಶೌಚಾಲಯದಲ್ಲಿ ಮೂವರು ಮುಸ್ಲೀಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿಯೊಬ್ಬಳ ಖಾಸಗಿ ವಿಡಿಯೋ ಮಾಡಿದ್ದಾರೆ ಎಂಬ ಈ ಪ್ರಕರಣದಲ್ಲಿ, ಆರೋಪಿಗಳಿಂದ ವಶಪಡಿಸಿಕೊಳ್ಳಲಾದ 3 ಐಫೋನ್ ಗಳನ್ನು ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯ ವಿಡಿಯೋ ಸಿಗದೇ ಪ್ರಕರಣದ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ.

You cannot copy content from Baravanige News

Scroll to Top