ರೀಲ್ಸ್ ಮಾಡ್ತಿದ್ದ ಪತ್ನಿಯ ಮೇಲೆ ಸಂಶಯದ ಭೂತ : ಹತ್ಯೆ ಮಾಡಿ ದೇಹವನ್ನ ಕಾವೇರಿ ನದಿಗೆ ಎಸೆದ ಪತಿ ; ಸಾಥ್ ಕೊಟ್ಟ ಮಾವ!

ಮಂಡ್ಯ: ರೀಲ್ಸ್ ಮಾಡುತ್ತಿದ್ದ ಪತ್ನಿಯ ಮೇಲೆ ಅನುಮಾನಗೊಂಡ ಪತಿ ಆಕೆಯನ್ನೇ ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯಕೊಪ್ಪಲು ಬಳಿ ನಡೆದಿದೆ. ಪೂಜಾ (26) ಗಂಡನಿಂದಲೇ ಕೊಲೆಯಾದ ಮಹಿಳೆ.

ಪತಿ ಶ್ರೀನಾಥ್ (33) ಮತ್ತು ಪೂಜಾ ಇಬ್ಬರು 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದ ಈ ದಂಪತಿಗೆ ಹೆಣ್ಣು ಮಗು ಕೂಡ ಇತ್ತು. ಆದರೆ ಬರು ಬರುತ್ತಾ ಪೂಜಾ ರೀಲ್ಸ್ ಮಾಡುವ ಹುಚ್ಚಿಗೆ ಬಿದ್ದಿದ್ದಳು. ರೀಲ್ಸ್ ಮಾಡುವುದರ ಜೊತೆಗೆ ಹೆಚ್ಚೆಚ್ಚು ಫೋನ್ ಬಳಸುತ್ತಿದ್ದಳು. ಹೀಗೆ ಅತಿಯಾದ ಫೋನ್ ಬಳಕೆಯಿಂದಾಗಿ ದಂಪತಿ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು.

ಪತ್ನಿ ಮೇಲೆ ಪತಿಗೆ ಸಂಶಯ

ಪೂಜಾ ರೀಲ್ಸ್ ಮಾಡುವುದರ ಜೊತೆಗೆ ಸ್ನೇಹಿತರೊಂದಿಗೆ ಚಾಟಿಂಗ್ ಕೂಡ ಮಾಡುತ್ತಿದ್ದಳು. ಇದೇ ವಿಚಾರವಾಗಿ ಗಂಡ ಶ್ರೀನಾಥ್ಗೆ ಸಂಶಯ ಕೂಡ ಶುರುವಾಗಿತ್ತು. ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ಕೂಡ ಆತನಲ್ಲಿ ಹುಟ್ಟಿಕೊಂಡಿತ್ತು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಪತ್ನಿ ಪೂಜಾಳ ಕುತ್ತಿಗೆಯನ್ನು ವೇಲ್ ನಿಂದ ಬಿಗಿದು ಶ್ರೀನಾಥ್ ಕೊಲೆಗೈದಿದ್ದಾನೆ.

ಮಗಳ ಕೊಲೆಗೆ ಅಳಿಯನಿಗೆ ಸಾಥ್ ಕೊಟ್ಟ ತಂದೆ

ಪೂಜಾಳ ಶವ ಸಾಗಿಸಲು ಶ್ರೀನಾಥ್ ಮಾವ ಶೇಖರ್ ಸಾಥ್ ನೀಡಿದ್ದಾರೆ. ಅಳಿಯನೊಂದಿಗೆ ಸೇರಿ ಮಗಳ ಶವವನ್ನ ಕಾವೇರಿ ನದಿಗೆ ಎಸೆದಿದ್ದಾರೆ. ಕೊಲೆಗೈದ ಬಳಿಕ ಮಾವ ಶೇಖರ್ಗೆ ಶ್ರೀನಾಥ್ ಕರೆ ಮಾಡಿದ್ದಾನೆ. ಮಗಳ ಕೊಲೆ ತಿಳಿದರೂ ಪೊಲೀಸರಿಗೆ ಹೇಳದೆ ಅಳಿಯನಿಗೆ ಮಾವ ಸಾಥ್ ಕೊಟ್ಟಿದ್ದಾನೆ.


ಮೃತದೇಹ ನದಿಗೆಸೆದರು

ಇನ್ನು ಮನೆಯಿಂದ ಶವವನ್ನು ಅಳಿಯ-ಮಾವ ಬೈಕ್ ನಲ್ಲಿ ಸಾಗಿಸಿದ್ದಾರೆ. ಬಳಿಕ ಮೃತದೇಹಕ್ಕೆ ಭಾರವಾದ ಕಲ್ಲು ಕಟ್ಟಿ ನದಿಗೆಸಿದಿದ್ದಾರೆ.

ನಿಮಿಷಾಂಭ ದೇವಸ್ಥಾನಕ್ಕೆ ಹೋಗಿದ್ದ ಕೊಲೆಗಾರ

ಶ್ರೀನಾಥ್ ಸೋಮವಾರ ಕೊಲೆಗೈದು ಮನೆಯಲ್ಲೇ ಇದ್ದ. ಅತ್ತ ಮಗಳ ಶವವನ್ನು ನದಿಗೆಸೆದು ತಂದೆ ಹೋಟೆಲ್ ಕೆಲಸದಲ್ಲಿ ತೊಡಗಿದ್ದನು. ಕೊಲೆ ಮಾಡಿದ 3 ದಿನಗಳ ಬಳಿಕ ಶ್ರೀನಾಥ್ ನಿಮಿಷಾಂಭ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತೆರಳಿದ್ದಾನೆ. ದೇವರ ದರ್ಶನದ ಬಳಿಕ 102ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರಿಗೆ ಶರಣಾದ ಬಳಿಕ ಶವ ಸಾಗಿಸಲು ಸಾಥ್ ನೀಡಿದ ಮಾವನ ಬಗ್ಗೆಯೂ ಹೇಳಿದ್ದಾನೆ. ಸದ್ಯ ಇಬ್ಬರನ್ನು ಅರಕೆರೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ನಡೆಸುತ್ತಿದ್ದಾರೆ.

You cannot copy content from Baravanige News

Scroll to Top