ಕಡಬ ತಾಲೂಕಿನ ರೆಂಜಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದ ಕಾರಣಕ್ಕೆ ಕಡಬ ತಾಲೂಕಿನ ಕೊಂಬಾರು ಸಮೀಪದಿಂದ ಸೆರೆ ಹಿಡಿಯಲಾಗಿದ್ದ ಕಾಡಾನೆಯೊಂದು ಕೊಡಗಿನ ಮತ್ತಿಗೋಡು ಆನೆ ಶಿಬಿರದಲ್ಲಿ ಮೃತ ಪಟ್ಟಿದೆ ಎಂದು ವರದಿಯಾಗಿದೆ.
ಕಡಬದಿಂದ ಸೆರೆ ಹಿಡಿಯಲಾಗಿದ್ದ ಕಾಡಾನೆಯನ್ನು ಕೊಡಗಿನ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಗಿತ್ತು. ಆದರೆ ಶುಕ್ರವಾರ ಈ ಆನೆ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಅದರ ಮರಣೋತ್ತರ ಪರೀಕ್ಷೆ ನಡೆಸುವ ಕಾರ್ಯ ಮಾಡಲಾಯಿತು.
ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲದಲ್ಲಿ ಫೆಬ್ರವರಿ 20ರಂದು ಬೆಳ್ಳಂ ಬೆಳಗ್ಗೆ ಕಾಡಾನೆ ದಾಳಿಗೆ ರಂಜಿತಾ (24) ಹಾಗೂ ರಮೇಶ್ ರೈ (58) ಎಂಬವರು ಮೃತರಾಗಿದ್ದರು. ಘಟನೆಯಿಂದ ಆಕ್ರೋಶಗೊಂಡಿದ್ದ ಸಾರ್ವಜನಿಕರು ಕಾಡಾನೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು.
ದುಬಾರೆ ಮತ್ತು ತಿತಿಮತಿಯಿಂದ ಐದು ಸಾಕಾನೆಗಳನ್ನು ತರಿಸಿ ಕಾರ್ಯಾಚರಣೆ ಆರಂಭಿಸಿ, ಎರಡನೇ ದಿನ ಕಡಬ ತಾಲೂಕಿನ ಕೊಂಬಾರು ಸಮೀಪದ ಮಂಡೆಕರ ಎಂಬಲ್ಲಿ ಕಾಡಾನೆಯನ್ನು ಸೆರೆಹಿಡಿಯಲಾಗಿತ್ತು. ಬಳಿಕ ಅದನ್ನು ಕೊಡಗಿನ ಆನೆ ಶಿಬಿರಕ್ಕೆ ಕೊಂಡೊಯ್ಯಲಾಗಿತ್ತು. ಇದೀಗ ಅಲ್ಲಿ ಆನೆ ನಿಧನ ಹೊಂದಿದೆ ಎಂದು ತಿಳಿದು ಬಂದಿದೆ.