PFIಗೆ ಫಾರಿನ್ ಫಂಡಿಂಗ್ : ಮಂಗಳೂರಿನ ಮೂರು ಕಡೆ NIA ದಾಳಿ

ಮಂಗಳೂರು : ನಿಷೇಧಿತ ಪಿಎಫ್‍ಐ ಸಂಘಟನೆಗೆ ವಿದೇಶದಿಂದ ಫಂಡಿಗ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆ ಎನ್‍ಐಎ ದಾಳಿ ನಡೆಸಿದೆ.

ಉಳ್ಳಾಲದ ಕಿನ್ಯಾ, ವಳಚ್ಚಿಲ್ ಪದವು ಮತ್ತು ಪಾಣೆಮಂಗಳೂರಿನಲ್ಲಿ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಬ್ರಾಹಿಂ ಎಂಬಾತನ ಮನೆಯಲ್ಲಿ ಎನ್‍ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದ ಇಬ್ರಾಹಿಂ, ಪಿಎಫ್‍ಐ ನಿಷೇಧದ ಬಳಿಕ ತಲೆಮರೆಸಿಕೊಂಡಿದ್ದ. ಆತನ ಮನೆಯಲ್ಲಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಪಿಎಫ್‍ಐ ಸಂಘಟನೆಯ ಫಂಡಿಂಗ್ ನೆಟ್‍ವರ್ಕ್ ಬೇಧಿಸಿದ್ದ ಎನ್‍ಐಎ ಅಧಿಕಾರಿಗಳು ಬಂಧಿತರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಇಬ್ರಾಹಿಂ ಹೆಸರು ಪ್ರಸ್ತಾಪವಾಗಿತ್ತು. ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್‍ವರ್ಕ್ ಜೊತೆ ಸಂಪರ್ಕ ಇರುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿನ ಮುಸ್ತಾಕ್ ಎಂಬಾತನ ಮನೆ ಮೇಲೆ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಅಲ್ಲದೇ ಬಂಟ್ವಾಳದ ಮೆಲ್ಕಾರ್‍ನ ಇಬ್ರಾಹಿಂ ನಂದಾವರ ಎಂಬಾತನ ಮನೆಗೂ ಭೇಟಿ ನೀಡಿದ್ದ ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸಿ ತೆರಳಿದ್ದಾರೆ..

Scroll to Top