ಉಡುಪಿ, ಆ.14: ವಿದ್ಯುತ್ ಕಂಬವೊಂದಕ್ಕೆ ಸ್ಕೂಟರ್ ಢಿಕ್ಕಿ ಹೊಡೆದು ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ವರಂಗದ ಮಾತಿಬೆಟ್ಟು ಎಂಬಲ್ಲಿ ನಡೆದಿದೆ.
ಸೂರಿಮಣ್ಣು ನಿವಾಸಿ ಪ್ರಭಾಚಂದ್ರ ಆಚಾರ್ಯ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಭಾನುವಾರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಮುನಿಯಾಲುನಿಂದ ಸೂರಿಮಣ್ಣು ಕಡೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ವರಂಗ ಗ್ರಾಮದ ಮಾತಿಬೆಟ್ಟು ಹಾಲಿನ ಡೈರಿ ತಿರುವಿನಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಪ್ರಭಾಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.